ವಕೀಲರ ಸಂಘದಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಹುದ್ದೆಗಳ ಮೀಸಲಾತಿಗೆ ಸುಪ್ರೀಂ ಕೋರ್ಟ್ ಆದೇಶ
ಹೊಸದಿಲ್ಲಿ : ಸರ್ವೋಚ್ಚ ನ್ಯಾಯಾಲಯವು ಗುರುವಾರ ಮಹತ್ವದ ಆದೇಶವೊಂದರಲ್ಲಿ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (ಎಸ್ಸಿಬಿಎ)ನ ಕಾರ್ಯಕಾರಿ ಸಮಿತಿಯಲ್ಲಿ ಕನಿಷ್ಠ ಮೂರನೇ ಒಂದರಷ್ಟು ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿರಿಸುವಂತೆ ನಿರ್ದೇಶನ ನೀಡಿದೆ. ಮೇ 16ರಂದು ನಡೆಯಲಿರುವ ಎಸ್ಸಿಬಿಎ ಚುನಾವಣೆಗೆ ಕೇವಲ 15 ದಿನಗಳ ಮುನ್ನ ಈ ಆದೇಶ ಹೊರಬಿದ್ದಿದೆ.
ಮುಂಬರುವ ಚುನಾವಣೆಯಲ್ಲಿ ಖಜಾಂಚಿ, ಕಾರ್ಯಕಾರಿ ಸಮಿತಿಯ ಒಂಭತ್ತು ಹುದ್ದೆಗಳಲ್ಲಿ ಮೂರು ಮತ್ತು ಹಿರಿಯ ಕಾರ್ಯಕಾರಿ ಸಮಿತಿಯ ಆರು ಹುದ್ದೆಗಳ ಪೈಕಿ ಎರಡು ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿರಿಸುವಂತೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಕೆ.ವಿ.ವಿಶ್ವನಾಥನ್ ಅವರ ಪೀಠವು ಎಸ್ಸಿಬಿಎಗೆ ಆದೇಶಿಸಿತು.
ಎಸ್ಸಿಬಿಎಯ ಮಹಿಳಾ ಸದಸ್ಯರು ಇತರ ಹುದ್ದೆಗಳಿಗೆ ಸ್ಪರ್ಧಿಸುವಂತಿಲ್ಲ ಎನ್ನುವುದು ತನ್ನ ಆದೇಶದ ಅರ್ಥವಲ್ಲ ಎಂದು ಸ್ಪಷ್ಟಪಡಿಸಿದ ಪೀಠವು, ಈ ಚುನಾವಣೆಯಲ್ಲಿ ಖಜಾಂಚಿ ಹುದ್ದೆಯನ್ನು ಮಹಿಳೆಗೆ ಮೀಸಲಿರಿಸಲಾಗಿದೆ ಮತ್ತು ಇನ್ನು ಮುಂದೆ ಸರದಿ ಆಧಾರದಲ್ಲಿ ಪದಾಧಿಕಾರಿಗಳ ಒಂದು ಹುದ್ದೆಯನ್ನು ಮಹಿಳೆಯರಿಗೆ ಮೀಸಲಿರಿಸಲಾಗುವುದು ಎಂದು ತಿಳಿಸಿತು.
ಕಾರ್ಯಕಾರಿ ಸದಸ್ಯರಾಗಿ ಮಹಿಳೆಯರಿಗೆ ಕನಿಷ್ಠ ಎರಡು ಹುದ್ದೆಗಳನ್ನು ಮೀಸಲಿರಿಸುವ ಕುರಿತು ಚರ್ಚಿಸಲು ಎರಡು ತಿಂಗಳುಗಳಲ್ಲಿ ಸರ್ವಸದಸ್ಯರ ಸಭೆಯನ್ನು ಕರೆಯಲಾಗುವುದು ಎಂದು ಎಸ್ಸಿಬಿಎ ಅಧ್ಯಕ್ಷ ಆದಿಶ್ ಅಗರವಾಲ್ ಅವರು ಫೆ.29ರಂದು ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದರು.
ಮಹಿಳಾ ಮೀಸಲಾತಿ ಕುರಿತು ಚರ್ಚಿಸಲು ಸಭೆಯನ್ನು ಕರೆಯಬೇಕು ಎಂದು ಕೋರಿ ನ್ಯಾಯವಾದಿ ಯೋಗಮಾನ್ಯ ಎಂ.ಜಿ.ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಉಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು. ಒಳಗೊಳ್ಳುವಿಕೆ ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸಲು ಮತ್ತು ಲೈಂಗಿಕ ಕಿರುಕುಳ ತಡೆಗೆ ಗಮನವನ್ನು ಹೆಚ್ಚಿಸಲು ಎಸ್ಸಿಬಿಎಯಂತಹ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಸಮರ್ಪಕ ಪ್ರಾತಿನಿಧ್ಯವು ಮುಖ್ಯವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.
ಎಸ್ಸಿಬಿಎಗೆ ಮೇ 16 ಚುನಾವಣೆ ನಡೆಯಲಿದ್ದು, ಫಲಿತಾಂಶಗಳು ಮೇ 19ರಂದು ಪ್ರಕಟಗೊಳ್ಳಲಿವೆ.