ಚುನಾವಣಾ ಆಯುಕ್ತರ ನೇಮಕಾತಿಗೆ ತಡೆ ಹೇರಲು ಸುಪ್ರೀಂ ಕೋರ್ಟ್ ನಕಾರ
ಹೊಸದಿಲ್ಲಿ: ಚುನಾವಣಾ ಆಯುಕ್ತರ ನೇಮಕಾತಿ ಕುರಿತಾದ ಕಾನೂನಿಗೆ ತಡೆ ಹೇರಲು ಸುಪ್ರೀಂ ಕೋರ್ಟ್ ಮತ್ತೆ ನಿರಾಕರಿಸಿದೆ ಹಾಗೂ ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ವಾರಗಳಿರುವಾಗ, ಈಗಿನ ಹಂತದಲ್ಲಿ ಹಾಗೆ ಮಾಡಿದಲ್ಲಿ “ಗೊಂದಲಕ್ಕೆ ಕಾರಣವಾಗಬಹುದು” ಎಂದು ಹೇಳಿದೆ.
ಹೊಸ ಕಾಯಿದೆಯಂತೆ ಆಯ್ಕೆ ಸಮಿತಿಯು ಆಯ್ಕೆಮಾಡಿದ ಹಾಗೂ ಇತ್ತೀಚೆಗೆ ನೂತನವಾಗಿ ನೇಮಕಗೊಂಡ ಇಬ್ಬರು ಹೊಸ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಹಾಗೂ ಸುಖಬೀರ್ ಸಿಂಗ್ ಸಂಧು ಅವರ ವಿರುದ್ಧ ಯಾವುದೇ ಆರೋಪಗಳಿಲ್ಲ ಎಂಬುದನ್ನೂ ನ್ಯಾಯಾಲಯ ಗಣನೆಗೆ ತೆಗೆದುಕೊಂಡಿದೆ.
“ಚುನಾವಣಾ ಆಯೋಗವು ಕಾರ್ಯಾಂಗದ ನಿಯಂತ್ರಣದಲ್ಲಿದೆ ಎಂದು ನೀವು ಹೇಳಲಾಗದು,” ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಾಂಕರ್ ದತ್ತ ಅವರ ಪೀಠ ಹೇಳಿದೆ.
“ಕೇಂದ್ರ ಜಾರಿಗೊಳಿಸಿರುವ ಕಾನೂನು ತಪ್ಪು ಎಂದು ಹೇಳಲಾಗದು, ನೇಮಕಾತಿಗೊಂಡವರ ವಿರುದ್ಧ ಯಾವುದೇ ಆರೋಪಗಳಿಲ್ಲ, ಚುನಾವಣೆಗಳು ಹತ್ತಿರ ಬರುತ್ತಿವೆ, ಸಮತೋಲನ ಕಾಪಾಡುವುದು ಅಗತ್ಯ,” ಎಂದು ಪೀಠ ಹೇಳಿದೆ.