ಟಿಎಂಸಿ ವಿರುದ್ಧದ, ನೀತಿ ಸಂಹಿತೆ ಉಲ್ಲಂಘಿಸುವ ಜಾಹೀರಾತುಗಳಿಗೆ ತಡೆಯಾಜ್ಞೆ ವಿಚಾರ: ಬಿಜೆಪಿ ಮೇಲ್ಮನವಿ ಅರ್ಜಿ ಪರಿಗಣಿಸಲು ಸುಪ್ರೀಂ ಕೋರ್ಟ್ ನಕಾರ
ಹೊಸದಿಲ್ಲಿ: ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುವಂತಹ ಟಿಎಂಸಿ ವಿರುದ್ಧದ ಜಾಹೀರಾತುಗಳನ್ನು ಪ್ರಕಟಿಸುವುದರಿಂದ ಬಿಜೆಪಿಗೆ ತಡೆ ಹೇರಿದ ಏಕ ಸದಸ್ಯ ಪೀಠದ ಆದೇಶದ ಕುರಿತಂತೆ ಹಸ್ತಕ್ಷೇಪ ನಡೆಸಲು ಕೊಲ್ಕತ್ತಾ ಹೈಕೋರ್ಟ್ ನಿರಾಕರಿಸಿದ ನಂತರ ಬಿಜೆಪಿ ಸಲ್ಲಿಸಿದ ಮೇಲ್ಮನವಿ ಅಪೀಲನ್ನು ಸುಪ್ರೀಂ ಕೋರ್ಟ್ ಇಂದು ಪರಿಗಣಿಸಲು ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ಕೆ ವಿ ವಿಶ್ವನಾಥನ್ ಅವರ ಪೀಠ ಈ ಅರ್ಜಿ ಪರಿಗಣಿಸಲು ನಿರಾಕರಿಸಿ, ಜಾಹೀರಾತು ಹೊರನೋಟಕ್ಕೆ ನಿಂದನಾತ್ಮಕವಾಗಿದೆ ಎಂದು ಹೇಳಿದೆ.
ನಂತರ ಬಿಜೆಪಿ ಪರ ಹಾಜರಿದ್ದ ವಕೀಲ ಪಿ ಎಸ್ ಪಟ್ವಾಲಿಯಾ ಅವರು ಮೇಲ್ಮನವಿ ಅರ್ಜಿ ವಾಪಸ್ ಪಡೆಯುವ ಇಂಗಿತ ವ್ಯಕ್ತಪಡಿಸಿದರು. ನಂತರ ಹಿಂಪಡೆಯಲಾಗಿದೆ ಎಂದು ಅರ್ಜಿ ವಜಾಗೊಳಿಸಲಾಯಿತು.
ಕೊಲ್ಕತ್ತಾ ಹೈಕೋರ್ಟಿನ ಏಕ ಸದಸ್ಯ ಪೀಠವು ಮೇ 20ರಂದು ಆದೇಶ ಹೊರಡಿಸಿ ಜೂನ್ 4ರ ತನಕ, ಅಂದರೆ ಲೋಕಸಭಾ ಚುನಾವಣಾ ಫಲಿತಾಂಶ ಹೊರಬೀಳುವ ತನಕ ನೀತಿ ಸಂಹಿತೆ ಉಲ್ಲಂಘಿಸುವ ಜಾಹೀರಾತುಗಳನ್ನು ಪ್ರಕಟಿಸುವುದರಿಂದ ಬಿಜೆಪಿಗೆ ತಡೆ ಹೇರಿತ್ತಲ್ಲದೆ, ಪಶ್ಚಿಮ ಬಂಗಾಳದ ಆಡಳಿತ ಟಿಎಂಸಿಯ ವಿರುದ್ಧ ಕೂಡ ನಿಂದನಾತ್ಮಕ ಜಾಹೀರಾತು ಪ್ರಕಟಿಸದಂತೆ ತಡೆ ಹೇರಿತ್ತು.