ಚುನಾವಣಾ ಬಾಂಡ್ ಯೋಜನೆ: ತನಿಖಾ ತಂಡ ರಚನೆಗೆ ಸುಪ್ರೀಂ ಕೋರ್ಟ್ ನಕಾರ
ಹೊಸದಿಲ್ಲಿ: ರಾಜಕೀಯ ಪಕ್ಷಗಳು ಮತ್ತು ಕಾರ್ಪೊರೇಟ್ ದಾನಿಗಳ ನಡುವೆ ‘ಕೊಟ್ಟು ತೆಗೆದುಕೊಳ್ಳುವ’ ವ್ಯವಸ್ಥೆಗಳ ಆರೋಪಗಳ ನಡುವೆ ಈಗ ನಿಷೇಧಿಸಲಾಗಿರುವ ಚುನಾವಣಾ ಬಾಂಡ್‌ಗಳ ಮಾರಾಟ ಕುರಿತು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ನ್ಯಾಯಾಲಯದ ನಿಗಾದಡಿ ವಿಶೇಷ ತನಿಖಾ ತಂಡ (ಎಸ್‌ಐಟಿ)ದಿಂದ ತನಿಖೆಯನ್ನು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ವಜಾಗೊಳಿಸಿದೆ.
ರಾಜಕೀಯ ಪಕ್ಷ ಮತ್ತು ಕಾರ್ಪೊರೇಟ್ ಸಂಸ್ಥೆಯ ನಡುವೆ ‘ಕೊಟ್ಟು ತೆಗೆದುಕೊಳ್ಳುವ’ ವ್ಯವಹಾರದ ಆರೋಪಗಳನ್ನು ಮಾಡಿರುವ ವೈಯಕ್ತಿಕ ದೂರುಗಳನ್ನು ಕಾನೂನಿನಡಿ ಲಭ್ಯವಿರುವ ಪರಿಹಾರದ ಆಧಾರದಲ್ಲಿ ನಿರ್ವಹಿಸಬೇಕು ಮತ್ತು ಅದು ನಿರ್ದಿಷ್ಟ ಆರೋಪಗಳ ಕುರಿತು ತನಿಖೆಗೆ ಅಧಿಕಾರಿಗಳು ನಿರಾಕರಿಸಿದರೆ ಆಯ್ಕೆಗಳನ್ನು ಒಳಗೊಂಡಿರುತ್ತದೆ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು, ಈ ವಿಷಯದಲ್ಲಿ ಈ ನ್ಯಾಯಾಲಯವು ಮಧ್ಯಪ್ರವೇಶಿಸುವುದು ಸಕಾಲಿಕವಲ್ಲ ಮತ್ತು ಸೂಕ್ತವಲ್ಲ, ಏಕೆಂದರೆ ಎಲ್ಲ ಪರಿಹಾರಗಳ ವೈಫಲ್ಯದ ನಂತರವೇ ಮಧ್ಯಪ್ರವೇಶಕ್ಕೆ ಮುಂದಾಗಬೇಕು. ಈ ಸಾಮಾನ್ಯ ಪರಿಹಾರಗಳು ಪರಿಣಾಮಕಾರಿಯಲ್ಲ ಎಂದು ಈ ಹಂತದಲ್ಲಿ ನ್ಯಾಯಾಲಯವು ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.
ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ತನಿಖೆಯನ್ನು ಕೋರಿದ ಅರ್ಜಿ ಸೇರಿದಂತೆ ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ನಾಲ್ಕು ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು.
ಸರಕಾರಗಳು,ಆಡಳಿತ ಪಕ್ಷ ಮತ್ತು ಪ್ರಮುಖ ಕಾರ್ಪೊರೇಟ್ ಸಂಸ್ಥೆಗಳು ಭಾಗಿಯಾಗಿರುವುದರಿಂದ ಈ ವಿಷಯವು ವಿಶೇಷ ತನಿಖೆಗೆ ಅರ್ಹವಾಗಿದೆ ಎಂದು ವಾದಿಸಿದ ಹಿರಿಯ ನ್ಯಾಯವಾದಿ ಪ್ರಶಾಂತ ಭೂಷಣ ಅವರು,8,000 ಕೋಟಿ ರೂ.ಗೂ ಅಧಿಕ ಹಣ ಕೈಬದಲಾಗಿದೆ. ಕೆಲವು ಪ್ರಕರಣಗಳಲ್ಲಿ,ತೊಂದರೆಗಳಲ್ಲಿ ಸಿಕ್ಕಿಕೊಂಡಿದ್ದ ಕಂಪನಿಗಳು ಅವುಗಳಿಂದ ಪಾರಾಗಲು ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆಗಳನ್ನು ನೀಡಿವೆ. ಉದಾಹರಣೆಗೆ ತಮಿಳುನಾಡಿನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದ ಐಎಫ್‌ಬಿ ಆಗ್ರೋ ಬಾಂಡ್‌ಗಳ ರೂಪದಲ್ಲಿ 40 ಕೋಟಿ ರೂ.ಗಳನ್ನು ಪಾವತಿಸಿತ್ತು. ಇದು ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಲ್ಲ ಎಂದರು.
ಇದು ಭ್ರಷ್ಟಾಚಾರದ ಅಸಾಧಾರಣ ಪ್ರಕರಣ,ಭಾರತದ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಹಣಕಾಸು ಹಗರಣಗಳಲ್ಲಿ ಒಂದಾಗಿದೆ. ಈ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ತನಿಖೆಯ ಹೊರತು ಇದರಲ್ಲಿ ಯಾವುದೂ ಹೊರಗೆ ಬರುವುದಿಲ್ಲ. ಕಿಕ್‌ಬ್ಯಾಕ್‌ಗಳು ಮತ್ತು ಲಂಚಗಳ ಮೂಲಕ ಗಳಿಸಿದ ಹಣವನ್ನು ಅನುಭವಿಸಲು ಯಾವುದೇ ರಾಜಕೀಯ ಪಕ್ಷಕ್ಕೆ ಅವಕಾಶ ನೀಡಕೂಡದು ಎಂದು ಭೂಷಣ ವಾದಿಸಿದರು.
‘ದಾನಿಗಳು ಮತ್ತು ಅವರಿಂದ ಹಣವನ್ನು ಸ್ವೀಕರಿಸಿದ ರಾಜಕೀಯ ಪಕ್ಷಗಳ ಹೆಸರುಗಳು ಮತ್ತು ಇತರ ವಿವರಗಳನ್ನು ಬಹಿರಂಗಗೊಳಿಸಲು ನಾವು ಎಸ್‌ಬಿಐಗೆ ಆದೇಶಿಸಿದ್ದೆವು ಮತ್ತು ಈ ಆದೇಶದ ಪಾಲನೆಯಾಗಿದೆ. ಒಂದು ಹಂತದವರೆಗೆ ನಾವು ಹೋಗಿದ್ದೆವು, ನಾವು ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿದ್ದೇವೆ. ಈಗ ಎಸ್‌ಐಟಿ ಏನನ್ನು ತನಿಖೆ ಮಾಡುತ್ತದೆ? ಕಾನೂನಿನಡಿ ಪರಿಹಾರಗಳು ಲಭ್ಯವಿರುವಾಗ ಎಸ್‌ಐಟಿ ಅನ್ನು ನೇಮಿಸುವ ಅಗತ್ಯವಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ಹೇಳಿತು.