ತಬ್ರೇಝ್ ಅನ್ಸಾರಿ ಹತ್ಯೆ ಪ್ರಕರಣ: ಎಲ್ಲಾ ಹತ್ತು ಅಪರಾಧಿಗಳಿಗೆ 10 ವರ್ಷ ಜೈಲು ಶಿಕ್ಷೆ

ತಪ್ಪಿತಸ್ಥರು ಎಂದು ನ್ಯಾಯಾಲಯ ಘೋಷಿಸಿದ ಬೆನ್ನಲ್ಲೇ ಆರೋಪಿಗಳಾದ ಭೀಮ್‌ ಸಿಂಗ್‌ ಮುಂಡ, ಕಮಲ್‌ ಮಹತೊ, ಮದನ್‌ ನಾಯಕ್‌, ಅತುಲ್‌ ಮಹಾಲಿ, ಸುನಾಮೊ ಪ್ರಧಾನ್‌, ವಿಕ್ರಮ್‌ ಮಂಡಲ್‌, ಚಮು ನಾಯಕ್‌, ಪ್ರೇಮ್‌ ಮಹಾಲಿ ಮತ್ತು ಮಹೇಶ್‌ ಮಹಾಲಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

Update: 2023-07-05 12:37 GMT
Editor : Muad | Byline : ವಾರ್ತಾಭಾರತಿ

Photo: PTI

ರಾಂಚಿ: ತಬ್ರೇಝ್‌ ಅನ್ಸಾರಿ ಎಂಬ ವ್ಯಕ್ತಿಯನ್ನು ಥಳಿಸಿ ಕೊಂದ 2019ರ ಪ್ರಕರಣದ 10 ಮಂದಿ ಅಪರಾಧಿಗಳಿಗೆ ಜಾರ್ಖಂಡ್‌ನ ಸೆರೈಕೇಲ ನ್ಯಾಯಾಲಯ ಇಂದು ನೀಡಿದ ತೀರ್ಪಿನಲ್ಲಿ ಐಪಿಸಿಯ ಸೆಕ್ಷನ್‌ 304 ಅಡಿಯಲ್ಲಿ 10 ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ. ಅಪರಾಧಿಗಳಿಗೆ ನ್ಯಾಯಾಲಯ ತಲಾ ರೂ 15000 ದಂಡ ಕೂಡ ವಿಧಿಸಿದೆ.

ಜೂನ್‌ 27ರಂದು ನೀಡಿದ್ದ ತೀರ್ಪಿನಲ್ಲಿ ಎಲ್ಲಾ 10 ಮಂದಿ ಆರೋಪಿಗಳನ್ನು ನ್ಯಾಯಾಲಯ ದೋಷಿಗಳೆಂದು ಘೋಷಿಸಿತ್ತು. ಆರೋಪಿಗಳ ಪೈಕಿ ಒಬ್ಬಾತ ಕುಶಲ್‌ ಮಹಲಿ ವಿಚಾರಣಾ ಹಂತದಲ್ಲಿ ಮೃತಪಟ್ಟಿದ್ದರೆ ಇತರ ಇಬ್ಬರನ್ನು ಸಾಕ್ಷ್ಯದ ಕೊರತೆಯ ಕಾರಣ ನೀಡಿ ಖುಲಾಸೆಗೊಳಿಸಲಾಗಿತ್ತು.

ತಪ್ಪಿತಸ್ಥರು ಎಂದು ನ್ಯಾಯಾಲಯ ಘೋಷಿಸಿದ ಬೆನ್ನಲ್ಲೇ ಆರೋಪಿಗಳಾದ ಭೀಮ್‌ ಸಿಂಗ್‌ ಮುಂಡ, ಕಮಲ್‌ ಮಹತೊ, ಮದನ್‌ ನಾಯಕ್‌, ಅತುಲ್‌ ಮಹಾಲಿ, ಸುನಾಮೊ ಪ್ರಧಾನ್‌, ವಿಕ್ರಮ್‌ ಮಂಡಲ್‌, ಚಮು ನಾಯಕ್‌, ಪ್ರೇಮ್‌ ಮಹಾಲಿ ಮತ್ತು ಮಹೇಶ್‌ ಮಹಾಲಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ಪ್ರಮುಖ ಆರೋಪಿ ಪ್ರಕಾಶ್‌ ಮಂಡಲ್‌ ಆಲಿಯಾಸ್‌ ಪಪ್ಪು ಮಂಡಲ್‌ ಈ ಹಿಂದೆಯೇ ನ್ಯಾಯಾಂಗ ಬಂಧನದಲ್ಲಿದ್ದ.

ಅನ್ಸಾರಿಯನ್ನು ಜೂನ್‌ 17, 2019ರಂದು ಸೆರೈಕೇಲ ಪೊಲೀಸ್‌ ಠಾಣಾ ವ್ಯಾಪ್ತಿಯ ಧತ್‌ಕಿಡಿಹ್‌ ಎಂಬಲ್ಲಿ ಮೋಟಾರ್‌ ಸೈಕಲ್‌ ಕಳ್ಳತನದ ಆರೋಪದ ಮೇಲೆ ರಾಡ್‌ಗಳಿಂದ ಥಳಿಸಿ ಸಾಯಿಸಲಾಗಿತ್ತು.

ಪುಣೆಯಲ್ಲಿ ವೆಲ್ಡರ್‌ ವೃತ್ತಿಯಲ್ಲಿದ್ದ ಅನ್ಸಾರಿ ಈದ್‌ ಆಚರಣೆಗೆಂದು ಊರಿಗೆ ಬಂದಿದ್ದ ವೇಳೆ ಘಟನೆ ನಡೆದಿತ್ತು.

Tags:    

Writer - ವಾರ್ತಾಭಾರತಿ

contributor

Editor - Muad

contributor

Byline - ವಾರ್ತಾಭಾರತಿ

contributor

Similar News