ದೇವಸ್ಥಾನದ ಗರ್ಭಗುಡಿಗೆ ನಮ್ಮ ಪ್ರವೇಶವನ್ನು ನಿಷೇಧಿಸಲಾಗಿದೆ: ತಮಿಳುನಾಡು ಸರಕಾರ ನೇಮಿಸಿದ್ದ ಬ್ರಾಹ್ಮಣೇತರ ಅರ್ಚಕರ ಆರೋಪ

Update: 2025-02-19 18:23 IST
ದೇವಸ್ಥಾನದ ಗರ್ಭಗುಡಿಗೆ ನಮ್ಮ ಪ್ರವೇಶವನ್ನು ನಿಷೇಧಿಸಲಾಗಿದೆ: ತಮಿಳುನಾಡು ಸರಕಾರ ನೇಮಿಸಿದ್ದ ಬ್ರಾಹ್ಮಣೇತರ ಅರ್ಚಕರ ಆರೋಪ

PC : indianexpress.com

  • whatsapp icon

ತಿರುಚಿರಾಪಳ್ಳಿ: ಎಲ್ಲ ಜಾತಿಗಳ ಜನರು ದೇವಸ್ಥಾನಗಳ ಅರ್ಚಕರಾಗುವುದನ್ನು ಸಾಧ್ಯವಾಗಿಸಿರುವ ತಮಿಳುನಾಡು ಸರಕಾರದ ಮಹತ್ವದ ಸುಧಾರಣಾ ಕ್ರಮದಡಿ ಇಲ್ಲಿಯ ಕುಮಾರವಯಲೂರ್ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಅರ್ಚಕರಾಗಿ ನೇಮಕಗೊಂಡಿದ್ದ ಬ್ರಾಹ್ಮಣೇತರ ಸಮುದಾಯಕ್ಕೆ ಸೇರಿದ ಎಸ್.ಪ್ರಭು ಮತ್ತು ಜಯಪಾಲ್ ಅವರು,ಅಲ್ಲಿಯ ಆನುವಂಶಿಕ ಅರ್ಚಕರು ತಾವು ಗರ್ಭಗುಡಿಯನ್ನು ಪ್ರವೇಶಿಸುವುದನ್ನು ನಿಷೇಧಿಸಿದ್ದಾರೆ ಎಂದು ಆರೋಪಿಸಿದ್ದಾರೆ. ದೇವಸ್ಥಾನದಲ್ಲಿ ಪ್ರಮುಖ ಧಾರ್ಮಿಕ ಸಮಾರಂಭವೊಂದು ನಡೆಯಲಿದ್ದು,ಈ ಹಿನ್ನೆಲೆಯಲ್ಲಿ ತಮ್ಮ ವಿರುದ್ಧದ ತಾರತಮ್ಯ ನಿವಾರಣೆಗೆ ಸರಕಾರದ ಹಸ್ತಕ್ಷೇಪವನ್ನು ಕೋರಿದ್ದಾರೆ ಎಂದು indianexpress.com ವರದಿ ಮಾಡಿದೆ.

2021ರಲ್ಲಿ ಅರ್ಚಕರಾಗಿ ನೇಮಕಗೊಂಡಿದ್ದ ಅವರು,ಆಗಿನಿಂದಲೂ ತಮ್ಮ ಸೇವೆಯನ್ನು ದೇವಸ್ಥಾನದ ಆವರಣದಲ್ಲಿರುವ ಗಣೇಶ ಮತ್ತು ನವಗ್ರಹ ಮಂದಿರಗಳಿಗೆ ಸೀಮಿತಗೊಳಿಸಲಾಗಿದೆ,ದೇವಸ್ಥಾನದ ಮುಖ್ಯ ದೇವರಾದ ಮುರುಗನ್ ಆಸೀನರಾಗಿರುವ ಗರ್ಭಗುಡಿಯನ್ನು ಪ್ರವೇಶಿಸಿ ಪೂಜೆ ಮಾಡಲು ತಮಗೆ ಅವಕಾಶವನ್ನು ನಿರಾಕರಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹಾಗೂ ಹಿಂದು ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಸಲ್ಲಿಸಿರುವ ಔಪಚಾರಿಕ ಅರ್ಜಿಯಲ್ಲಿ ತಮ್ಮ ದುಃಸ್ಥಿತಿಯನ್ನು ತೋಡಿಕೊಂಡಿರುವ ಈ ಅರ್ಚಕರು,ತಮ್ಮ ವೃತ್ತಿಗೆ ಕಾನೂನು ಮತ್ತು ಆಡಳಿತಾತ್ಮಕ ಬೆಂಬಲದ ಹೊರತಾಗಿಯೂ ತಮ್ಮ ಹೊರಗಿಡುವಿಕೆ ಮುಂದುವರಿದಿದೆ ಎಂದು ದೂರಿದ್ದಾರೆ.

ದೇವಸ್ಥಾನದ ಭಕ್ತರು ತಮ್ಮನ್ನು ಗೌರವಿಸುತ್ತಿದ್ದಾರಾದರೂ ಆನುವಂಶಿಕ ಶಿವಾಚಾರ್ಯರು (ಬ್ರಾಹ್ಮಣ ಅರ್ಚಕರು) ದೇವಸ್ಥಾನದೊಳಗೆ ತಮಗೆ ಸಮಾನ ಹಕ್ಕುಗಳನ್ನು ನಿರಾಕರಿಸುತ್ತಲೇ ಬಂದಿದ್ದಾರೆ. ಈ ತಾರತಮ್ಯವು ತಮಗೆ ತೀವ್ರ ಮಾನಸಿಕ ಯಾತನೆ ಮತ್ತು ಅವಮಾನವನ್ನುಂಟು ಮಾಡಿದೆ ಎಂದು ಅವರು ತಿಳಿಸಿದ್ದಾರೆ.

2021ರಲ್ಲಿ ತಮಿಳುನಾಡು ಸರಕಾರವು ಕೈಗೊಂಡಿದ್ದ ಮಹತ್ವದ ಸುಧಾರಣಾ ಕ್ರಮದಡಿ 15 ಮಹಿಳೆಯರು ಸೇರಿದಂತೆ 382 ಬ್ರಾಹ್ಮಣೇತರರು ಸರಕಾರಿ ಪ್ರಮಾಣೀಕೃತ ಅರ್ಚಕ ತರಬೇತಿಯನ್ನು ಪೂರ್ಣಗೊಳಿಸಿದ್ದು,2022ರಿಂದಲೂ ದೇವಸ್ಥಾನಗಳಲ್ಲಿ ನೇಮಕಕ್ಕಾಗಿ ಕಾಯುತ್ತಿದ್ದಾರೆ. ಈವರೆಗೆ ಕೇವಲ 29 ಜನರನ್ನು ಅಧಿಕೃತವಾಗಿ ಅರ್ಚಕರನ್ನಾಗಿ ನೇಮಕಗೊಳಿಸಲಾಗಿದೆ. ಹೆಚ್ಚುವರಿಯಾಗಿ 95 ವ್ಯಕ್ತಿಗಳು ಪ್ರಸ್ತುತ ತರಬೇತಿಯನ್ನು ಪಡೆಯುತ್ತಿದ್ದಾರೆ.

ತಿರುವಣ್ಣಾಮಲೈ,ಮದುರೈ ಮತ್ತು ಶ್ರೀರಂಗಮ್‌ನಂತಹ ಮಹತ್ವದ ಧಾರ್ಮಿಕ ಕ್ಷೇತ್ರಗಳಲ್ಲಿಯ ಪ್ರಮುಖ ದೇವಸ್ಥಾನಗಳಲ್ಲಿ ಬ್ರಾಹ್ಮಣೇತರ ಅರ್ಚಕರ ನೇಮಕಾತಿಗಳಿಗೆ ಜಾತಿ ಆಧಾರಿತ ವಿರೋಧದಿಂದಾಗಿ ಈ ಸುಧಾರಣಾ ಕ್ರಮದ ಸಂಪೂರ್ಣ ಅನುಷ್ಠಾನಕ್ಕೆ ಅಡ್ಡಿ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News