ಕ್ಷೇತ್ರ ಪುನರ್‌ವಿಂಗಡಣೆ ವಿರುದ್ಧ ತಮಿಳುನಾಡು ಸಿಎಂ ಸ್ಟಾಲಿನ್ ರಣಕಹಳೆ

Update: 2025-03-07 21:05 IST
MK Stalin

ಎಂ.ಕೆ.ಸ್ಟಾಲಿನ್ | PC : PTI 

  • whatsapp icon

ಚೆನ್ನೈ: ಕೇಂದ್ರ ಸರಕಾರ ಪ್ರಸ್ತಾವಿಸಿರುವ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆ ವಿರುದ್ಧ ತಾನು ರಚಿಸಿರುವ ರಾಜಕೀಯ ಪಕ್ಷಗಳ ಜಂಟಿ ಕಾರ್ಯ ಸಮಿತಿಗೆ ಸೇರ್ಪಡೆಗೊಳ್ಳುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಶುಕ್ರವಾರ ಪಶ್ಚಿಮಬಂಗಾಳದ ಮಮತಾ ಬ್ಯಾನರ್ಜಿ, ಪಂಜಾಬ್‌ನ ಭಗವಂತ್ ಮಾನ್ ಹಾಗೂ ಬಿಜೆಪಿ ಆಳ್ವಿಕೆಯ ಒಡಿಶಾದ ಮೋಹನ್ ಚಂದ್ರ ಮಾಝಿ ಸೇರಿದಂತೆ ಏಳು ಮಂದಿ ಸಿಎಂಗಳಿಗೆ ಶುಕ್ರವಾರ ಕರೆ ನೀಡಿದ್ದಾರೆ.

ಕ್ಷೇತ್ರ ಪುನರ್‌ವಿಂಗಡಣೆ ವಿರುದ್ಧ ಸಾಮೂಹಿಕವಾಗಿ ಕಾರ್ಯತಂತ್ರವೊಂದನ್ನು ರೂಪಿಸಲು ಮಾರ್ಚ್ 22ರಂದು ಚೆನ್ನೈನಲ್ಲಿ ಆಯೋಜಿಸಲಾದ ಸಭೆಯಲ್ಲಿ ಪಾಲ್ಗೊಳ್ಳುವಂತೆ ಕೇರಳದ ಪಿಣರಾಯಿ ವಿಜಯನ್, ಕರ್ನಾಟಕದ ಸಿದ್ದರಾಮಯ್ಯ, ತೆಲಂಗಾಣದ ರೇವಂತ್ ರೆಡ್ಡಿ, ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಹಾಗೂ ಅಧಿಕಾರದಲ್ಲಿರದ ರಾಜಕೀಯ ಪಕ್ಷಗಳು ಹಾಗೂ ಬಿಜೆಪಿಯ ಹಿರಿಯ ನಾಯಕರನ್ನು ಕೂಡಾ ಅವರು ಆಹ್ವಾನಿಸಿದ್ದಾರೆ.

‘‘ಕ್ಷೇತ್ರ ಪುನರ್‌ವಿಂಗಡಣೆಯು ಒಕ್ಕೂಟ ವ್ಯವಸ್ಥೆಯ ಮೇಲೆ ನಡೆದ ಘೋರ ಆಕ್ರಮಣವಾಗಿದೆ. ಸಂಸತ್‌ನಲ್ಲಿ ಧ್ವನಿಯೆತ್ತುವ ನಮ್ಮ ಹಕ್ಕನ್ನು ಕಿತ್ತುಕೊಳ್ಳಲಾಗಿದೆ. ಜನಸಂಖ್ಯಾ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ ರಾಜ್ಯಗಳನ್ನು ಶಿಕ್ಷಿಸಲಾಗುತ್ತಿದೆ. ಈ ಪ್ರಜಾತಾಂತ್ರಿಕ ಅನ್ಯಾಯ ನಡೆಯುವುದಕ್ಕೆ ನಾವು ಆಸ್ಪದ ನೀಡುವುದಿಲ್ಲ’’ ಎಂದು ಅವರು ‘ಎಕ್ಸ್’ನಲ್ಲಿ ಬರೆದಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಸ್ಟಾಲಿನ್ ಹಾಗೂ ಅವರ ಸರಕಾರವು ಕೇಂದ್ರದ ‘ಹಿಂದಿ ಹೇರಿಕೆ’ ನೀತಿ ಹಾಗೂ ಕ್ಷೇತ್ರ ಪುನರ್‌ವಿಂಗಡಣೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಸಂವಿಧಾನದ ಒಕ್ಕೂಟ ಸ್ವರೂಪ , ತಮಿಳು ಜನತೆ ಹಾಗೂ ಭಾಷೆಯ ಮೇಲೆ ನಡೆದ ದಾಳಿ ಇದಾಗಿದೆಯೆಂದು ಅದು ಆಪಾದಿಸಿದೆ.

ಕೇಂದ್ರ ಸರಕಾರವು ಈ ಆರೋಪಗಳನ್ನು ನಿರಾಕರಿಸಿದ್ದು, ನೂತನ ಶಿಕ್ಷಣ ನೀತಿ ಹಾಗೂ ತ್ರಿಭಾಷಾ ಸೂತ್ರವು ಯಾವುದೇ ವಿದ್ಯಾರ್ಥಿಯ ಮೇಲೆ ಹಿಂದಿಯನ್ನು ಹೇರುವುದಿಲ್ಲವೆಂದ ಹೇಳಿದೆ ಹಾಗೂ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಯಿಂದ ದಕ್ಷಿಣದ ರಾಜ್ಯಗಳ ಮೇಲೆ ಪ್ರತಿಕೂಲ ಪರಿಣಾಮವಾಗುವುದಿಲ್ಲವೆಂದು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News