ತಮಿಳುನಾಡು ಬಿಎಸ್ಪಿ ಮುಖ್ಯಸ್ಥನ ಹತ್ಯೆ: ಚೆನ್ನೈನಲ್ಲಿ ಬೆಂಬಲಿಗರಿಂದ ಪ್ರತಿಭಟನೆ

Update: 2024-07-06 13:22 GMT

PC : PTI 

ಚೆನ್ನೈ: ಚೆನ್ನೈನಲ್ಲಿ ಆರು ಮಂದಿಯ ಗುಂಪಿನಿಂದ ಇರಿತಕ್ಕೊಳಗಾಗಿ ಹತ್ಯೆಗೀಡಾಗಿರುವ ತಮಿಳುನಾಡು ಬಿಎಸ್ಪಿ ಮುಖ್ಯಸ್ಥ ಕೆ. ಆರ್ಮ್‌ಸ್ಟ್ರಾಂಗ್ ಪರ ಅವರ ಬೆಂಬಲಿಗರು ಶನಿವಾರ ಚೆನ್ನೈನ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ(CBI)ಕ್ಕೆ ವಹಿಸಬೇಕು ಎಂದು ಅವರು ಆಗ್ರಹಿಸಿದರು.

ಈ ಹತ್ಯೆಯು ಪೂರ್ವನಿಯೋಜಿತವಾಗಿದ್ದು, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲೇಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಈ ಘಟನೆಯಲ್ಲಿ ಗುಪ್ತಚರ ವಿಭಾಗ ವಿಫಲಗೊಂಡಿದೆ ಎಂದೂ ಬಿಎಸ್ಪಿ ಪದಾಧಿಕಾರಿಯೊಬ್ಬರು ಆರೋಪಿಸಿದರು.

ಆರ್ಮ್‌ಸ್ಟ್ರಾಂಗ್ ಅವರ ಮರಣೋತ್ತರ ಪರೀಕ್ಷೆ ನಡೆಯುತ್ತಿರುವ ಸರಕಾರಿ ಆಸ್ಪತ್ರೆಯ ಎದುರು ಅವರ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಕುರಿತು ಇಂದು ಬೆಳಗ್ಗೆ ಪ್ರತಿಕ್ರಿಯಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಪ್ರಕರಣದ ಕುರಿತ ತನಿಖೆಯನ್ನು ಚುರುಕುಗೊಳಿಸುವಂತೆ ಹಾಗೂ ಕಾನೂನಿನ ಪ್ರಕಾರ ದುಷ್ಕರ್ಮಿಗಳನ್ನು ಶಿಕ್ಷಿಸುವಂತೆ ಪೊಲೀಸರಿಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಘಟನೆಯ ಕುರಿತು PTI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಉತ್ತರ ಚೆನ್ನೈನ ಹೆಚ್ಚುವರಿ ಪೊಲೀಸ್ ಆಯುಕ್ತ ಅಸ್ರಾ ಗರ್ಗ್, “ನಾವು ಈವರೆಗೆ ಎಂಟು ಮಂದಿ ಶಂಕಿತರನ್ನು ವಶಕ್ಕೆ ಪಡೆದಿದ್ದೇವೆ. ಇದು ಪ್ರಾಥಮಿಕ ಹಂತದ ತನಿಖೆಯಾಗಿರುವುದರಿಂದ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಕೆಲ ಸಮಯದ ನಂತರ ಇನ್ನೂ ಹೆಚ್ಚು ವಾಸ್ತವಾಂಶಗಳು ಹಾಗೂ ಸನ್ನಿವೇಶಗಳು ಹೊರ ಬರುವುದರೊಂದಿಗೆ ಪ್ರಕರಣದ ಕುರಿತು ಸ್ಪಷ್ಟ ಹಾಗೂ ಉತ್ತಮ ಚಿತ್ರಣ ದೊರೆಯಲಿದೆ” ಎಂದು ಹೇಳಿದ್ದಾರೆ.

ಈ ನಡುವೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಆರ್ಮ್‌ಸ್ಟ್ರಾಂಗ್ ಹತ್ಯೆಗೆ ಆಘಾತ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News