ತಮಿಳುನಾಡು: ಒಂದೇ ಕುಟುಂಬದ ನಾಲ್ವರ ಹತ್ಯೆ
ಚೆನ್ನೈ: ಪೂರ್ವ ದ್ವೇಷದ ಹಿನ್ನಲೆಯಲ್ಲಿ ಮೂವರು ವ್ಯಕ್ತಿಗಳು ಇಬ್ಬರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸದಸ್ಯರನ್ನು ಕಡಿದು ಕೊಲೆಗೈದಿರುವ ಘಟನೆ ಜಿಲ್ಲಾಯ ಪಲ್ಲಾಡಂನಲ್ಲಿ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಲ್ಲಾ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವವರೆಗೆ ಮೃತದೇಹಗಳನ್ನು ಸ್ವೀಕರಿಸುವುದಿಲ್ಲ ಎಂದು ಸಂಬಂಧಿಕರು ಹೇಳಿದ್ದರು. ಅಲ್ಲದೆ, ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪಲ್ಲಡಂನಲ್ಲಿ ಪ್ರತಿಭಟನೆ ನಡೆಸಿದ್ದರು. ಅನಂತರ ಹಿರಿಯ ಪೊಲೀಸರು ಸ್ಥಳಕ್ಕೆ ಧಾವಿಸಿ ಅವರನ್ನು ಸಮಾಧಾನಪಡಿಸಿದ್ದರು.
ಮೃತಪಟ್ಟವರನ್ನು ಸೆಂಥಿಲ್ ಕುಮಾರ್, ಅವರ ತಾಯಿ ಪುಷ್ಪಾವತಿ, ಸೋದರ ಸಂಬಂಧಿ ಮೋಹನ್ ಹಾಗೂ ಇನ್ನೋರ್ವ ಸಂಬಂಧಿ ರಥಿನಾಂಬಾಲ್ ಎಂದು ಗುರುತಿಸಲಾಗಿದೆ. ಪಲ್ಲಡಂನ ಕಲ್ಲಕಿನಾರುನಲ್ಲಿರುವ ಸೆಂಥಿಲ್ ಕುಮಾರ್ ಅವರು ಅಂಗಡಿಯ ಬಳಿ ಇರುವ ಮನೆಯ ಸಮೀಪ ಇವರ ಗಾಯಗೊಂಡ ಮೃತದೇಹಗಳು ಪತ್ತೆಯಾಗಿದ್ದವು. ಅನಂತರ ಅವರ ಮೃತದೇಹಗಳನ್ನು ಪಲ್ಲಡಂನಲ್ಲಿರುವ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಯಿತು.
ಸೆಂಥಿಲ್ ಕುಮಾರ್ ಅವರ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ವೆಂಕಟೇಶ್ ಎಂಬಾತ ಇತರ ಇಬ್ಬರೊಂದಿಗೆ ಸೆಪ್ಟಂಬರ್ 3ರಂದು ರಾತ್ರಿ ಸೆಂಥಿಲ್ ಕುಮಾರ್ ಅವರ ಅಂಗಡಿಯ ಸಮೀಪ ಮದ್ಯಪಾನ ಮಾಡುತ್ತಿದ್ದ. ಇದಕ್ಕೆ ಸೆಂಥಿಲ್ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ಅವರು ಆಕ್ರೋಶಿತರಾಗಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಅನಂತರ ಸೆಂಥಿಲ್ ಕುಮಾರ್ ಅವರನ್ನು ಈ ಮೂವರ ತಂಡ ಸುತ್ತುವರಿದು ಕಡಿದು ಕೊಂದಿತು. ಅವರ ಕೂಗು ಕೇಳಿದ ಸೋದರ ಸಂಬಂಧಿ, ತಾಯಿ ಹಾಗೂ ಇನ್ನೊಬ್ಬರು ಸಂಬಂಧಿ ರಕ್ಷಿಸಲು ಧಾವಿಸಿದರು. ಆದರೆ, ಅವರು ಈ ಮೂವರನ್ನು ಕೂಡ ಕಡಿದು ಕೊಂದರು ಎಂದು ಪೊಲೀಸರು ತಿಳಿಸಿದರು.