ಸಮಗ್ರ ಶಿಕ್ಷಣ ಯೋಜನೆಗೆ ಅನುದಾನ ನೀಡದೆ ಕೇಂದ್ರದಿಂದ ವಂಚನೆ: ತಮಿಳುನಾಡು ವಿತ್ತ ಸಚಿವ ತಂಗರಾಜನ್ ಆರೋಪ
Photo - ANI
ಹೊಸದಿಲ್ಲಿ: ರಾಷ್ಟ್ರೀಯ ಶಿಕ್ಷಣ ನೀತಿಯ ತ್ರಿಭಾಷಾ ಸೂತ್ರದ ಕುರಿತ ಚರ್ಚೆಯನ್ನು ತಮಿಳುನಾಡು ವಿತ್ತ ಸಚಿವ ಡಾ. ಪಳನಿವೇಲು ತಂಗರಾಜ್ ಅವರು ವಿಧಾನಸಭೆಯಲ್ಲಿ ಮಾಡಿದ ಬಜೆಟ್ ಭಾಷಣದಲ್ಲಿ ಮುಂದುವರಿಸಿದ್ದಾರೆ. ತಮಿಳುನಾಡು ಹಾಗೂ ಕೇಂದ್ರ ಸರಕಾರಗಳ ನಡುವೆ ಭುಗಿಲೆದ್ದಿರುವ ಭಾಷಾ ವಿವಾದವನ್ನು ಪ್ರಸ್ತಾವಿಸಿದ ಅವರು, ಹಿಂದಿ ಹೇರಿಕೆಯನ್ನು ಡಿಎಂಕೆ ಬಲವಾಗಿ ವಿರೋಧಿಸುವುದಾಗಿ ತಿಳಿಸಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಸಮಗ್ರ ಶಿಕ್ಷಣ ಯೋಜನೆಗಾಗಿನ 2150 ಕೋಟಿ ರೂ.ಗಳನ್ನು ನೀಡದೆ ವಂಚಿಸಿದೆಯೆಂದು ತಂಗರಾಜನ್ ಆಪಾದಿಸಿದರು. ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)ಗೆ ತನ್ನ ವಿರೋಧವನ್ನು ಹಿಂತೆಗೆದುಕೊಳ್ಳುವವರೆಗೆ ನಿಧಿಯನ್ನು ಬಿಡುಗಡೆಗೊಳಿಸಲು ಕೇಂದ್ರ ಸರಕಾರವು ನಿರಾಕರಿಸುತ್ತಿದೆ ಎಂದರು.
ತಮಿಳುನಾಡಿನ ದ್ವಿಭಾಷಾ ನೀತಿಯನ್ನು ಸಮರ್ಥಿಸಿದ ವಿತ್ತ ಸಚಿವರು, ತಮಿಳುಜನತೆಯ ಜಾಗತಿಕ ಮಟ್ಟದಲ್ಲಿ ಸಾಧನೆಗೆ ಇದು ಅಸ್ತ್ರವಾಗಿದೆ ಎಂದರು. ದ್ವಿಭಾಷಾ ನೀತಿಯು ತಮಿಳುನಾಡಿನ ಪ್ರಗತಿಗೆ ಗಣನೀಯ ಕೊಡುಗೆಯನ್ನು ನೀಡಿದೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಯ ವಿರುದ್ಧ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸರಕಾರವು ದೃಢವಾಗಿ ವಿರೋಧಿಸುತ್ತಾ ಬಂದಿದೆ. ಈ ಬಗ್ಗೆ ಸಾಂಕೇತಿಕ ನಡೆಯಾಗಿ ಸ್ಟಾಲಿನ್ ಸರಕಾರವು 2025-26ನೇ ಸಾಲಿನ ಬಜೆಟ್ನಲ್ಲಿ ಅಧಿಕೃತ ರೂಪಾಯಿ ಚಿಹ್ನೆಯ ಬದಲಿಗೆ, ತಮಿಳು ಆಕ್ಷರ ರೂ.ವನ್ನು ಬಳಸಿತ್ತು.