ತಮಿಳುನಾಡು: ಒಳಚರಂಡಿ ಸ್ವಚ್ಛಗೊಳಿಸುವಾಗ ವಿಷಾನಿಲ ಸೇವಿಸಿ ಇಬ್ಬರು ದಲಿತ ಕಾರ್ಮಿಕರು ಮೃತ್ಯು
ಅವದಿ (ತಮಿಳುನಾಡು): ಶಸ್ತ್ರಾಸ್ತ್ರ ಜವಳಿ ಕಾರ್ಖಾನೆಯೊಂದರ ಸಿಬ್ಬಂದಿಗಳ ವಸತಿ ಸಮುಚ್ಚಯದ ಒಳಚರಂಡಿಯನ್ನು ಸ್ವಚ್ಛಗೊಳಿಸುವಾಗ ವಿಷಾನಿಲ ಸೇವಿಸಿ ಇಬ್ಬರು ದಲಿತ ಕಾರ್ಮಿಕರು ಮೃತಪಟ್ಟಿರುವ ಘಟನೆ ಗುರುವಾರ ತಮಿಳುನಾಡಿನ ಅವದಿ ಗ್ರಾಮದಲ್ಲಿ ನಡೆದಿದೆ ಎಂದು The Indian Express ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, ವಸತಿ ಸಮುಚ್ಚಯದ ಒಳಚರಂಡಿಯನ್ನು ಸ್ವಚ್ಛಗೊಳಿಸಲು ಖಾಸಗಿ ಗುತ್ತಿಗೆದಾರರೊಬ್ಬರು ಕೆ.ಮೋಸಸ್ (40) ಹಾಗೂ ಸಿ.ದೇವನ್ (50) ಎಂಬ ಸ್ವಚ್ಛತಾ ಕೆಲಸಗಾರರನ್ನು ನೇಮಿಸಿದ್ದರು. ಆದರೆ, ಆ ಕೆಲಸಗಾರರಿಗೆ ಸುರಕ್ಷತಾ ಸಲಕರಣೆಗಳನ್ನು ಒದಗಿಸಲಾಗಿರಲಿಲ್ಲ ಎಂದು ತಿಳಿಸಿದ್ದಾರೆ.
ಈ ಸಂಬಂಧ ಗುತ್ತಿಗೆದಾರ ಹಾಗೂ ಮೇಲ್ವಿಚಾರಕನನ್ನು ಬಂಧಿಸಲಾಗಿದೆ.
ಒಳಚರಂಡಿಯನ್ನು ಪ್ರವೇಶಿಸಿದ ಕೂಡಲೇ ವಿಷಾನಿಲ ಸೇವಿಸಿರುವ ಮೋಸಸ್ ಪ್ರಜ್ಞಾಹೀನನಾಗಿದ್ದಾರೆ. ಅವರನ್ನು ರಕ್ಷಿಸಲು ಕೆಳಗಿಳಿದಿರುವ ದೇವನ್ ಕೂಡಾ ವಿಷಾನಿಲವನ್ನು ಸೇವಿಸಿ ಒಳಚರಂಡಿಯಲ್ಲೇ ಪ್ರಜ್ಞಾಹೀನನಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
“ಕೂಡಲೇ ಇತರ ಕೆಲಸಗಾರರು ಹಾಗೂ ದಾರಿಹೋಕರು ಈ ಕುರಿತು ಅಗ್ನಿಶಾಮಕ ದಳ ಹಾಗೂ ರಕ್ಷಣಾ ಸಿಬ್ಬಂದಿಗಳಿಗೆ ಮಾಹಿತಿ ರವಾನಿಸಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ” ಎಂದು ಪೊಲೀಸರು ಹೇಳಿದ್ದಾರೆ. “ಅಗ್ನಿಶಾಮಕ ಸಿಬ್ಬಂದಿಗಳು ಆ ಇಬ್ಬರು ಕೆಲಸಗಾರರನ್ನು ಹೊರತೆಗೆದು, ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಸಂದರ್ಭದಲ್ಲಿ ದೇವನ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೆ, ಒಳಚರಂಡಿಯಿಂದ ಹೊರತೆಗೆದಾಗಲೇ ಮೋಸಸ್ ಮೃತಪಟ್ಟಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ದೇವನ್ ಕೂಡಾ ಮೃತಪಟ್ಟಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
1993ರಿಂದ ಇಲ್ಲಿಯವರೆಗೆ ಭಾರತದಾದ್ಯಂತ ಒಳಚರಂಡಿ ಹಾಗೂ ಗಟಾರಗಳನ್ನು ಸ್ವಚ್ಛಗೊಳಿಸುವಾಗ ಒಟ್ಟು 1,035 ಮಂದಿ ಮೃತಪಟ್ಟಿದ್ದಾರೆ ಎಂದು ಈ ವರ್ಷದ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರ ಮಾಹಿತಿ ನೀಡಿತ್ತು.