ತಮಿಳುನಾಡು ರೈಲು ಅಪಘಾತದಿಂದ ಎಚ್ಚೆತ್ತ ರೈಲ್ವೆ ಇಲಾಖೆ | 15 ದಿನಗಳ ಇಂಟರ್ ಲಾಕಿಂಗ್ ಸ್ಥಳಗಳ ಪರಿಶೀಲನಾ ಅಭಿಯಾನಕ್ಕೆ ಚಾಲನೆ

Update: 2024-10-25 15:26 GMT

PC : ANI 

ಹೊಸದಿಲ್ಲಿ: ಇತ್ತೀಚೆಗೆ ತಮಿಳುನಾಡಿನಲ್ಲಿ ನಡೆದ ರೈಲು ಅಪಘಾತದಿಂದ ಎಚ್ಚೆತ್ತಿರುವ ರೈಲ್ವೆ ಇಲಾಖೆಯು, ಅಕ್ಟೋಬರ್ 23ರಿಂದ 15 ದಿನಗಳ ಕಾಲ ದೇಶಾದ್ಯಂತ ಇರುವ ಇಂಟರ್ ಲಾಕಿಂಗ್ ಸ್ಥಳಗಳು ಹಾಗೂ ರೈಲ್ವೆ ಕ್ರಾಸಿಂಗ್ ಗಳ ಸುರಕ್ಷತಾ ಪರಿಶೀಲನೆ ಅಭಿಯಾನಕ್ಕೆ ಚಾಲನೆ ನೀಡಿದೆ.

ಈ ಕುರಿತು ಎಲ್ಲ ರೈಲ್ವೆ ವಲಯಗಳು ಹಾಗೂ ವಿಭಾಗಗಳಿಗೆ ಪತ್ರ ಬರೆದಿರುವ ರೈಲ್ವೆ ಮಂಡಳಿ, ಇನ್ನಿತರ ಆಯಾಮಗಳೊಂದಿಗೆ, ಕಳೆದ ಮೂರು ವರ್ಷಗಳಲ್ಲಿ ಈ ವಿಭಜಕಗಳ ಬಳಿ ನಡೆದಿರುವ ಹಳಿ ತಪ್ಪಿದ ಪ್ರಕರಣಗಳ ಕುರಿತು ವಿಶೇಷ ಒತ್ತಿನ ಅಭಿಯಾನ ಕೈಗೆತ್ತಿಕೊಳ್ಳುಯವಂತೆ ಸೂಚಿಸಿದೆ.

ತಮಿಳುನಾಡಿನಲ್ಲಿ ಪ್ರಯಾಣಿಕರ ರೈಲು ಹಾಗೂ ಸರಕು ರೈಲಿನ ನಡುವೆ ಡಿಕ್ಕಿ ಸಂಭವಿಸಿದ ಸುಮಾರು 15 ದಿನಗಳ ನಂತರ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಈ ಘಟನೆಯ ಕುರಿತು ತನಿಖೆ ಪ್ರಗತಿಯಲ್ಲಿದ್ದು, ಇಂಟರ್ ಲಾಕಿಂಗ್ ವ್ಯವಸ್ಥೆಯಲ್ಲಿ ವಿಧ್ವಂಸಕ ಕೃತ್ಯ ನಡೆದಿರಬಹುದು ಅಥವಾ ಅದರಲ್ಲಿ ಯಾಂತ್ರಿಕ ಲೋಪವಾಗಿರಬಹುದು ಎಂದು ಪ್ರಾಥಮಿಕ ಶೋಧನೆಗಳು ಶಂಕಿಸಿವೆ.

ಅಕ್ಟೋಬರ್ 11ರಂದು ಚೆನ್ನೈ ಸಮೀಪದ ಕವರೈಪೆಟ್ಟೈ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಸರಕು ರೈಲಿಗೆ ಮೈಸೂರು-ದರ್ಭಾಂಗ ಬಾಗ್ಮತಿ ಎಕ್ಸ್ ಪ್ರೆಸ್ ರೈಲು ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಸುಮಾರು 19 ಮಂದಿ ಗಾಯಗೊಂಡಿದ್ದರು.

ಇದರ ಬೆನ್ನಿಗೇ ಈ ಅಪಘಾತದ ಕುರಿತು ಹಲವಾರು ಪ್ರಶ್ನೆಗಳೆದ್ದಿದ್ದವು. ಮುಖ್ಯವಾಗಿ ಇಂಟರ್ ಲಾಕಿಂಗ್ ವ್ಯವಸ್ಥೆಯ ಸುರಕ್ಷತೆ ಕುರಿತು ತೀವ್ರ ಕಳವಳ ವ್ಯಕ್ತವಾಗಿತ್ತು. ಈ ಕುರಿತು ತನಿಖೆ ನಡೆಸಲು ರೈಲ್ವೆ ಇಲಾಖೆಯು ಉನ್ನತ ಮಟ್ಟದ ಸಮಿತಿಯನ್ನು ರಚಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News