ಲಡಾಖ್‌ನ ಎರಡು ಪ್ರಮುಖ ಸ್ಥಳಗಳಿಂದ ಭಾರತ, ಚೀನಾ ಸೈನಿಕರ ವಾಪಸಾತಿ ಪ್ರಕ್ರಿಯೆ ಆರಂಭ
ಹೊಸದಿಲ್ಲಿ : ಪೂರ್ವ ಲಡಾಖ್ ವಿಭಾಗದಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಸಂಘರ್ಷಕ್ಕೆ ಸಾಕ್ಷಿಯಾಗಿದ್ದ ಡೆಮ್‌ಚೋಕ್ ಮತ್ತು ಡೆಪ್ಸಾಂಗ್‌ನಿಂದ ಭಾರತ ಮತ್ತು ಚೀನಾ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭಗೊಂಡಿದೆ.
ಗಡಿ ಗಸ್ತು ಕುರಿತು ಐತಿಹಾಸಿಕ ಒಪ್ಪಂದವೊಂದಕ್ಕೆ ಭಾರತ ಮತ್ತು ಚೀನಾ ಇತ್ತೀಚಿಗೆ ಅಂಕಿತ ಹಾಕಿದ್ದವು. 2020ರಲ್ಲಿ ಆರಂಭಗೊಂಡಿದ್ದ ಉಭಯ ದೇಶಗಳ ನಡುವಿನ ಮಿಲಿಟರಿ ಬಿಕ್ಕಟ್ಟಿಗೆ ಅಂತ್ಯಹಾಡಲು ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು.
ಒಪ್ಪಂದದ ಪ್ರಕಾರ ಭಾರತೀಯ ಯೋಧರು ಉಪಕರಣಗಳ ಸಹಿತ ಹಿಂದಕ್ಕೆ ಸರಿಯಲು ಆರಂಭಿಸಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಉಭಯ ದೇಶಗಳು ತಮ್ಮ ಪ್ರದೇಶದಲ್ಲಿಯ ತಲಾ ಒಂದು ಶಿಬಿರವನ್ನು ಕೆಲವು ತಾತ್ಕಾಲಿಕ ರಚನೆಗಳೊಂದಿಗೆ ತೆರವು ಮಾಡಿವೆ ಮತ್ತು ಚೀನೀ ಸೈನಿಕರು ನಾಲಾದ ಪೂರ್ವ ಭಾಗಕ್ಕೆ ವಾಪಸಾತಿಯನ್ನು ಆರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೂರ್ವ ಲಡಾಖ್‌ನಲ್ಲಿ ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ ಗಸ್ತು ಕಾರ್ಯಕ್ಕೆ ಸಂಬಂಧಿಸಿದಂತೆ ಮಹತ್ವದ ಒಪ್ಪಂದವೊಂದಕ್ಕೆ ಭಾರತ ಮತ್ತು ಚೀನಾ ಅ.21ರಂದು ಸಹಿ ಹಾಕಿದ್ದವು. ಈ ಒಪ್ಪಂದವು ಕಳೆದ ನಾಲ್ಕು ವಷಗಳಿಗೂ ಅಧಿಕ ಸಮಯದಿಂದ ತಲೆದೋರಿದ್ದ ಮಿಲಿಟರಿ ಬಿಕ್ಕಟ್ಟಿನ ಅಂತ್ಯವನ್ನು ಸೂಚಿಸಿದೆ.
ಅ.24ರಂದು ದಿಲ್ಲಿಯಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಸಮಾನ ಮತ್ತು ಪರಸ್ಪರ ಭದ್ರತೆಯ ತತ್ವಗಳ ಆಧಾರದಲ್ಲಿ ಸ್ಥಿರತೆಯನ್ನು ಮರುಸ್ಥಾಪಿಸುವ ಗುರಿಯ ಕುರಿತು ಉಭಯ ದೇಶಗಳು ಒಮ್ಮತಕ್ಕೆ ಬಂದಿವೆ ಎಂದು ಹೇಳಿದ್ದರು.