23 ವರ್ಷಗಳ ನಂತರ ಮೊದಲ ಬಾರಿ ಸ್ವದೇಶಿ ಸರಣಿಯಲ್ಲಿ ಸತತ 2ನೇ ಬಾರಿ ಮುನ್ನಡೆ ಬಿಟ್ಟುಕೊಟ್ಟ ಭಾರತ
ಪುಣೆ : ನ್ಯೂಝಿಲ್ಯಾಂಡ್ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲಿ ತನ್ನ ಮೊದಲ ಇನಿಂಗ್ಸ್‌ನಲ್ಲಿ ಕೇವಲ 156 ರನ್‌ಗೆ ಆಲೌಟಾಗಿರುವ ಭಾರತ ತಂಡವು ಅನಪೇಕ್ಷಿತ ದಾಖಲೆ ನಿರ್ಮಿಸಿದೆ.
23 ವರ್ಷಗಳಲ್ಲಿ ಮೊದಲ ಬಾರಿ ಸ್ವದೇಶದಲ್ಲಿ ನಡೆದಿರುವ ಟೆಸ್ಟ್ ಸರಣಿಯಲ್ಲಿ ಸತತ ಎರಡನೇ ಪಂದ್ಯದಲ್ಲಿ ಎದುರಾಳಿ ತಂಡಕ್ಕೆ 100ಕ್ಕೂ ಅಧಿಕ ರನ್ ಬಿಟ್ಟುಕೊಟ್ಟಿದೆ.
ಬೆಂಗಳೂರಿನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಕೇವಲ 46 ರನ್‌ಗೆ ಆಲೌಟಾಗಿ ಆಘಾತಕಾರಿ ಕುಸಿತ ಕಂಡಿದ್ದ ಭಾರತವು ಸ್ವದೇಶದಲ್ಲಿ ಕನಿಷ್ಠ ಸ್ಕೋರ್ ಗಳಿಸಿತ್ತು. ಕಿವೀಸ್‌ಗೆ 356 ರನ್ ಮುನ್ನಡೆ ಬಿಟ್ಟುಕೊಟ್ಟಿತ್ತು. ಇದರಿಂದಾಗಿ ಮೊದಲ ಪಂದ್ಯವನ್ನು 8 ವಿಕೆಟ್‌ಗಳ ಅಂತರದಿಂದ ಕಳೆದುಕೊಂಡಿತ್ತು.
ಭಾರತವು 2001ರಲ್ಲಿ ಆಸ್ಟ್ರೇಲಿಯ ತಂಡದ ವಿರುದ್ಧ ಸರಣಿಯಲ್ಲಿ ಸತತ ಟೆಸ್ಟ್ ಪಂದ್ಯಗಳಲ್ಲಿ 100ಕ್ಕೂ ಅಧಿಕ ರನ್ ಬಿಟ್ಟುಕೊಟ್ಟಿತ್ತು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ 173 ರನ್ ಹಾಗೂ ಕೋಲ್ಕತಾದ ಈಡನ್‌ಗಾರ್ಡನ್ಸ್‌ನಲ್ಲಿ 274 ರನ್ ಲೀಡ್ ಬಿಟ್ಟುಕೊಟ್ಟಿತ್ತು.
ಅನಪೇಕ್ಷಿತ ದಾಖಲೆಯ ಹೊರತಾಗಿಯೂ ಭಾರತವು ಆಸ್ಟ್ರೇಲಿಯ ತಂಡದ ವಿರುದ್ಧ ಮರು ಹೋರಾಟ ನೀಡಿ ಆ ಸರಣಿಯನ್ನು ಜಯಿಸಿತ್ತು. ನ್ಯೂಝಿಲ್ಯಾಂಡ್ ತಂಡದ ವಿರುದ್ಧವೂ ರೋಹಿತ್ ಬಳಗ ಅದೇ ರೀತಿಯ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.