ವ್ಯಾಪಾರ ಉತ್ತೇಜಿಸಲು AI, ರೊಬೊಟ್ ಗಳನ್ನು ಅಳವಡಿಸಿಕೊಳ್ಳುತ್ತಿರುವ ಬಹುತೇಕ ಭಾರತೀಯ ಉದ್ಯಮಿಗಳು : ವರದಿ

Update: 2024-10-25 15:23 GMT

PC: Meta AI

ಹೊಸದಿಲ್ಲಿ : ಕೃತಕ ಬುದ್ಧಿಮತ್ತೆ(AI) ತಂತ್ರಜ್ಞಾನ ಹಾಗೂ ರೊಬೊಟ್ ಗಳ ಬಳಕೆ ಜಾಗತಿಕ ಔದ್ಯಮಿಕ ವಲಯದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದ್ದು, ಈ ವಿನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಭಾರತೀಯ ಉದ್ಯಮಿಗಳೂ ಹಿಂದೆ ಬಿದ್ದಿಲ್ಲ. PwC ವರದಿಯ ಪ್ರಕಾರ, ಸುಸ್ಥಿರ ವ್ಯಾಪಾರ ರೂಢಿ ಹಾಗೂ ಆದಾಯವನ್ನು ಉತ್ತೇಜಿಸಲು ಗಮನಾರ್ಹ ಪ್ರಮಾಣದ ಭಾರತೀಯ ತಯಾರಕರು ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಹಾಗೂ ರೊಬೊಟ್ ಗಳನ್ನು ಬಳಸುತ್ತಿದ್ದಾರೆ ಎಂದು ಹೇಳಲಾಗಿದೆ.

ಆರು ಉದ್ಯಮಗಳ ಸುತ್ತ ನಡೆಸಿರುವ ತನ್ನ ಅಧ್ಯಯನ ವರದಿ ‘Decoding the Fifth Industrial Revolution: Marching towards a relient, sustainable and human-centric future’ಯಲ್ಲಿ ಶೇ. 93ರಷ್ಟು ಭಾರತೀಯ ತಯಾರಕರು ಸುಸ್ಥಿರ ರೂಢಿಗಳು ಹಾಗೂ ಆದಾಯವನ್ನು ಉತ್ತೇಜಿಸಲು ಐದನೇ ಕೈಗಾರಿಕಾ ಕ್ರಾಂತಿಯನ್ನು ಅಳವಡಿಸಿಕೊಂಡಿದ್ದಾರೆ ಎಂದು PwC ಹೇಳಿದೆ.

PwCಯ ಭಾರತದ ಸಂಶೋಧನಾ ತಂಡವು ಮೇ 2024ರಿಂದ ಜುಲೈ 2024ರ ನಡುವೆ ಆಟೊಮೊಟಿವ್, ಸಿಮೆಂಟ್, ರಾಸಾಯನಿಕಗಳು, ಕೈಗಾರಿಕಾ ಸರಕುಗಳು, ಲೋಹಗಳು, ಜವಳಿಗಳು ಹಾಗೂ ಸಿದ್ಧ ಉಡುಪು ಕೈಗಾರಿಕೆಗಳ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಈ ಅಧ್ಯಯನವನ್ನು ನಡೆಸಿದೆ.

ಸಂಶೋಧನೆಯ ಪ್ರಕಾರ, ಶೇ. 50ಕ್ಕೂ ಹೆಚ್ಚು ಭಾರತೀಯ ತಯಾರಕರು ಸುಸ್ಥಿರ ರೂಢಿಗಳಲ್ಲಿ ಹೂಡಿಕೆ ಮಾಡುವುದನ್ನು ಈ ವರ್ಷ ಆದ್ಯತೆಯಾಗಿಸಿಕೊಂಡಿದ್ದಾರೆ. ನವೀಕೃತ ಇಂಧನ ಮೂಲಗಳನ್ನು ಅಳವಡಿಸಿಕೊಳ್ಳಲು ಹಾಗೂ ಇಂಧನ ಕ್ಷಮತೆಯನ್ನು ಸುಧಾರಿಸಲು ಡಿಜಿಟಲ್ ತಂತ್ರಜ್ಞಾನಗಳನ್ನು ಸದ್ಬಳಕೆ ಮಾಡಿಕೊಳ್ಳುವ ಗುರಿಯನ್ನು ಈ ಹೂಡಿಕೆಗಳು ಹೊಂದಿವೆ.

ಇದರೊಂದಿಗೆ, ಮುಂಚೂಣಿ ತಯಾರಿಕಾ ಸಂಸ್ಥೆಗಳಲ್ಲಿನ ಶೇ. 52ರಷ್ಟು ಉನ್ನತ ಅಧಿಕಾರಿಗಳು ಆಜೀವ ಕಲಿಕೆ ಸಂಸ್ಕೃತಿಯನ್ನು ನಿರ್ಮಿಸಲು ಈ ವರ್ಷ ಹೂಡಿಕೆಗಳನ್ನು ಹಂಚಿಕೆ ಮಾಡುತ್ತಿದ್ದಾರೆ.

ಕೆಲವು ವಲಯಗಳು ತಮ್ಮ ಹೂಡಿಕೆಗಳಲ್ಲಿ ಇತರರಿಗಿಂತ ತೀರಾ ಕ್ರಿಯಾಶೀಲವಾಗಿವೆ. ಉದಾಹರಣೆಗೆ, ಸಿಮೆಂಟ್ ಮತ್ತು ಕೈಗಾರಿಕಾ ಸರಕುಗಳ ವಲಯಗಳು ಈ ವರ್ಷ ಹಾಗೂ ಮುಂದಿನ ವರ್ಷ ಕ್ಷಣಕ್ಷಣದ ದಾಸ್ತಾನು ಪತ್ತೆ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುವುದನ್ನು ಆದ್ಯತೆಯನ್ನಾಗಿಸಿಕೊಂಡಿವೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ಐದನೆ ಕೈಗಾರಿಕಾ ಕ್ರಾಂತಿ ಸನ್ನದ್ಧತೆಯ ಸಾಮರ್ಥ್ಯವು ನಮ್ಮ ಗ್ರಾಹಕರು, ಸಿಬ್ಬಂದಿಗಳು, ಪೂರೈಕೆ ಸರಪಣಿ, ವ್ಯವಹಾರ ಮಾದರಿಗಳು ಹಾಗೂ ಇಎಸ್ಜಿ ಬದ್ಧತೆಗಳಿಗೆ ಪ್ರಸ್ತುತವಾಗಿದ್ದು, ಮುಂದಿನ ಒಂದೆರಡು ವರ್ಷಗಳಲ್ಲಿ ನಮ್ಮ ಸರಾಸರಿ ಆದಾಯವು ಶೇ. 6.42ರಷ್ಟು ಹೆಚ್ಚಳವಾಗಲು ಸಹಾಯ ಮಾಡಲಿದೆ ಎಂದು ಬಹುತೇಕ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ ಎಂಬುದೂ ವರದಿಯಲ್ಲಿ ಬಹಿರಂಗವಾಗಿದೆ.

ಇದಲ್ಲದೆ, ಐದನೆ ಕೈಗಾರಿಕಾ ಕ್ರಾಂತಿಯನ್ನು ಅಳವಡಿಸಿಕೊಳ್ಳುವುದರಿಂದ, ನಮ್ಮ ಕೈಗಾರಿಕೆಗಳು ತುಂಬಾ ಮಹತ್ವದ ಲಾಭ ಗಳಿಸಲಿದ್ದು, ನಮ್ಮ ಆದಾಯದ ಸಾಮರ್ಥ್ಯವು ಶೇ. 7ಕ್ಕೂ ಮೀರಿ ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂದು ರಾಸಾಯನಿಕಗಳು, ಸಿಮೆಂಟ್, ಜವಳಿ ಹಾಗೂ ಸಿದ್ಧ ಉಡುಪುಗಳ ವಲಯದ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಮ್ಮ ಗ್ರಾಹಕರು ಆವಿಷ್ಕಾರಿ ಉತ್ಪನ್ನಗಳು ಹಾಗೂ ಸೇವೆಗಳಿಗೆ ಹೆಚ್ಚು ಬೆಲೆ ತೆರಲು ಸಿದ್ಧರಿದ್ದಾರೆ ಎಂದು ಬಹುತೇಕ ಆಟೊಮೊಟಿವ್ ಹಾಗೂ ಲೋಹಗಳ ವಲಯದ ಅಧಿಕಾರಿಗಳು ಒತ್ತಿ ಹೇಳಿದ್ದಾರೆ. ಗ್ರಾಹಕರು ಸುಸ್ಥಿರ ಉತ್ಪನ್ನಗಳಿಗೆ ಹೆಚ್ಚು ಬೆಲೆ ತೆರಲು ಸಿದ್ಧರಿದ್ದಾರೆ ಎಂದು ಜವಳಿ ಮತ್ತು ಉಡುಪುಗಳ ವಲಯದ ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News