ಉತ್ತರ ಪ್ರದೇಶ | ಮದುವೆಯ ಮೊದಲ ರಾತ್ರಿಯ ವಿಡಿಯೊ ತೋರಿಸಿ ಸ್ನೇಹಿತನಿಗೆ ಬ್ಲ್ಯಾಕ್ ಮೇಲ್ : ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲು
ಶಹಜಹಾನ್ ಪುರ್ : ಸ್ನೇಹಿತನ ಮದುವೆಯ ಮೊದಲ ರಾತ್ರಿಯ ವಿಡಿಯೊ ತೋರಿಸಿ, ಆತನನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಶಿವಂ ಮಿಶ್ರಾ ಎಂದು ಗುರುತಿಸಲಾಗಿದ್ದು, ಕಳೆದ ವರ್ಷ ವಿವಾಹವಾಗಿದ್ದ ಆತನ ಸ್ನೇಹಿತನು ತನ್ನ ಮೊದಲ ರಾತ್ರಿ ವಿಡಿಯೊವನ್ನು ಚಿತ್ರೀಕರಿಸಿಕೊಂಡಿದ್ದ ಎಂದು ವಿಚಾರಣೆಯ ಸಂದರ್ಭದಲ್ಲಿ ಆತ ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
“ ಆರೋಪಿ ಶಿವಂ ಮಿಶ್ರ ಆ ವಿಡಿಯೊ ತೋರಿಸಿ ತನ್ನ ಸ್ನೇಹಿತನಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಪದೇ ಪದೇ ಹಣಕ್ಕಾಗಿ ಒತ್ತಾಯಿಸುತ್ತಿದ್ದ” ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ನಗರ) ಸಂಜಯ್ ಕುಮಾರ್ ತಿಳಿಸಿದ್ದಾರೆ.
“ಒಂದು ವೇಳೆ ಹಣ ಪಾವತಿಸದಿದ್ದರೆ, ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆ ಮಾಡುವುದಾಗಿ ತನ್ನ ಸ್ನೇಹಿತನಿಗೆ ಬೆದರಿಸಿರುವ ಶಿವಂ ಮಿಶ್ರಾ, ಹಲವಾರು ಬಾರಿ ಆತನಿಂದ ಹಣ ಸುಲಿಗೆ ಮಾಡಿದ್ದಾನೆ” ಎಂದು ಸಂಜಯ್ ಕುಮಾರ್ ಹೇಳಿದ್ದಾರೆ.
ಈ ಸಂಬಂಧ ದಾಖಲಾಗಿರುವ ದೂರನ್ನು ಆಧರಿಸಿ, ಶಿವಂ ಮಿಶ್ರಾರ ವಿರುದ್ಧ ಈ ಹಿಂದಿನ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 (ಹಲ್ಲೆ), 504 (ಉದ್ದೇಶಪೂರ್ವಕ ಅವಮಾನ) ಹಾಗೂ 506 (ಕ್ರಿಮಿನಲ್ ಬೆದರಿಕೆ) ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
“ಸಂತ್ರಸ್ತನ ಹೇಳಿಕೆ ಹಾಗೂ ತನಿಖೆ ಮುಂದುವರಿದಂತೆ ಲಭ್ಯವಾಗುವ ಸಾಕ್ಷ್ಯಾಧಾರಗಳನ್ನು ಆಧರಿಸಿ ಹೆಚ್ಚುವರಿ ಆರೋಪಗಳನ್ನು ಹೊರಿಸುವ ಸಾಧ್ಯತೆ ಇದೆ” ಎಂದೂ ಸಂಜಯ್ ಕುಮಾರ್ ತಿಳಿಸಿದ್ದಾರೆ.