ತಾಂತ್ರಿಕ ದೋಷ: ಸ್ಯಾನ್ ಫ್ರಾನ್ಸಿಸ್ಕೊಗೆ ಹೊರಟಿದ್ದ ವಿಮಾನ ತುರ್ತು ಭೂಸ್ಪರ್ಶ
Update: 2023-09-11 15:47 GMT
ಹೊಸದಿಲ್ಲಿ: ಬೆಂಗಳೂರಿನಿಂದ ಸ್ಯಾನ್ ಫ್ರಾನ್ಸಿಸ್ಕೊಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ತಾಂತ್ರಿಕ ದೋಷದ ಕಾರಣದಿಂದ ಅಲಸ್ಕಾ ನಗರದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ವಿಮಾನ ಯಾನ ಸಂಸ್ಥೆಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಎಐ 175 ವಿಮಾನ ಹಾರಾಟ ಆರಂಭಿಸಿದ ಬಳಿಕ ತಾಂತ್ರಿಕ ದೋಷ ಕಂಡು ಬಂತು. ವಿಮಾನವನ್ನು ಅಲಸ್ಕಾದಲ್ಲಿ ಇಳಿಸಿ ತಾಂತ್ರಿಕ ದೋಷವನ್ನು ಸರಿಪಡಿಸಲಾಯಿತು. ಬಳಿಕ ಹಾರಾಟ ಆರಂಭಿಸಿದ ವಿಮಾನ ಭಾರತೀಯ ಕಾಲಮಾನ ಬೆಳಗ್ಗೆ ಸುಮಾರು 10 ಗಂಟೆಗೆ ಸ್ಯಾನ್ ಫ್ರಾನ್ಸಿಸ್ಕೊದ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು.
ಈ ವಿಮಾನದಲ್ಲಿ 280ಕ್ಕೂ ಅಧಿಕ ಪ್ರಯಾಣಿಕರಿದ್ದರು. ವಿಮಾನ 4 ಗಂಟೆಗಳ ಕಾಲ ವಿಳಂಬವಾಗಿ ಸ್ಯಾನ್ ಫ್ರಾನ್ಸಿಸ್ಕೊ ವಿಮಾನ ನಿಲ್ದಾಣದಲ್ಲಿ ಇಳಿದಿದೆ. ಸಾಮಾನ್ಯವಾಗಿ ಬೆಂಗಳೂರಿನಿಂದ ಸ್ಯಾನ್ ಫ್ರಾನ್ಸಿಸ್ಕೊ ವಿಮಾನದ ಹಾರಾಟದ ಅವಧಿ ಸುಮಾರು 16 ಗಂಟೆಗಳು. ಏರ್ ಇಂಡಿಯಾ ಇದುವರೆಗೆ ಯಾವುದೇ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.