ತೆಲಂಗಾಣ | ಪೊಲೀಸರ ನೆರವಿನಿಂದ ‘ಡಿಜಿಟಲ್ ಬಂಧನ’ದಿಂದ ಪಾರಾದ ಟೆಕ್ಕಿ!
ಹೈದರಾಬಾದ್ : ಸೈಬರ್ ವಂಚಕರಿಂದ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ 30 ಗಂಟೆಗಳ ಕಾಲ ಡಿಜಿಟಲ್ ಬಂಧನಕ್ಕೆ ಒಳಗಾಗಿದ್ದ 44 ವರ್ಷದ ಐಟಿ ಉದ್ಯೋಗಿಯೊಬ್ಬರು ಕೊನೆಗೆ ಪೊಲೀಸರ ನೆರವಿನಿಂದ ಪಾರಾಗಿರುವ ಘಟನೆ ನಡೆದಿದೆ. ಅವರು ಈ ಘಟನೆಯಲ್ಲಿ ಯಾವುದೇ ಹಣ ಕಳೆದುಕೊಂಡಿಲ್ಲ ಎಂದು ಹೇಳಲಾಗಿದೆ.
ಅಕ್ಟೋಬರ್ 26ರ ಮುಂಜಾನೆಯಿಂದ ಅಕ್ಟೋಬರ್ 27ರವರೆಗೆ ಅವರನ್ನು ಧ್ವನಿ ಕರೆ ಹಾಗೂ ವಿಡಿಯೊ ಕರೆಗಳ ಮೂಲಕ ಡಿಜಿಟಲ್ ಬಂಧನದಲ್ಲಿರಿಸಿರುವ ಸೈಬರ್ ವಂಚಕರು, ತಮ್ಮ ಕರೆಯನ್ನು ಕಡಿತಗೊಳಿಸಬಾರದು ಎಂದು ಅವರಿಗೆ ತಾಕೀತು ಮಾಡಿದ್ದರು ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಿಮ್ಮನ್ನು ಬಂಧಿಸಲಾಗುವುದು. ಅದನ್ನು ಹಿಂಪಡೆಬೇಕಾದರೆ ರೂ. 40 ಲಕ್ಷ ಪಾವತಿಸಬೇಕು ಎಂದು ಸೈಬರ್ ವಂಚಕರು ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಅಕ್ಟೋಬರ್ 27ರ ಬೆಳಗ್ಗೆಯ ನಂತರವಷ್ಟೆ ಸೈಬರ್ ವಂಚಕರು ತಮ್ಮ ಕರೆಯನ್ನು ಕಡಿತಗೊಳಿಸಿದ್ದಾರೆ. ನಂತರ ಈ ಕುರಿತು ಹೈದರಾಬಾದ್ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ಸಂತ್ರಸ್ತ ಟೆಕ್ಕಿಯು ದೂರು ನೀಡಿದ ನಂತರವಷ್ಟೆ, ಅದೊಂದು ವಂಚನೆಯ ಕರೆ ಎಂದು ತಿಳಿದು ಬಂದಿದೆ.
ಈ ಘಟನೆಯಲ್ಲಿ ಯಾವುದೇ ಹಣ ಕಳೆದುಕೊಳ್ಳದೆ ಇದ್ದುದರಿಂದ ಸಂತ್ರಸ್ತ ಟೆಕ್ಕಿಯು ಈ ಕುರಿತು ದೂರು ದಾಖಲಿಸಿಲ್ಲ ಎಂದು ಹೈದರಾಬಾದ್ ಸೈಬರ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಡಿಜಿಟಲ್ ಬಂಧನದ ಕುರಿತು ಪ್ರಧಾನಿ ನರೇಂದ್ರ ಮೋದಿ ಜನರಿಗೆ ಎಚ್ಚರಿಕೆ ನೀಡಿದ ದಿನವೇ ಈ ಘಟನೆ ವರದಿಯಾಗಿದೆ. ಡಿಜಿಟಲ್ ಬಂಧನ ಒಂದು ಆನ್ ಲೈನ್ ವಂಚನೆಯಾಗಿದ್ದು, ಈ ಕುರಿತು ಪ್ರತಿಕ್ರಿಯಿಸುವುದಕ್ಕೂ ಮುನ್ನ, ತಾಳಿ, ಯೋಚಿಸಿ ಹಾಗೂ ನಂತರ ಕ್ರಮ ಕೈಗೊಳ್ಳಿ ಎಂಬ ತ್ರಿಸೂತ್ರದ ಸಲಹೆಯನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ನಲ್ಲಿ ನೀಡಿದ್ದರು.