ತೆಲಂಗಾಣದಲ್ಲಿ ನ.6ರಿಂದ ನ.30ರವರೆಗೆ ಜಾತಿಗಣತಿ
ಹೈದರಾಬಾದ್ :ತೆಲಂಗಾಣದಲ್ಲಿ ನವೆಂಬರ್ ವೆಂಬರ್ 6ರಿಂದ ನವೆಂಬರ್ 30ರವೆಗೆ ಜಾತಿ ಗಣತಿಯನ್ನು ನಡೆಸಲಾಗುವುದೆಂದು ರಾಜ್ಯದ ಕಾಂಗ್ರೆಸ್ ಸರಕಾರ ಘೋಷಿಸಿದೆ. ಇದರೊಂದಿಗೆ ತೆಲಂಗಾಣವು, ಬಿಹಾರ ಹಾಗೂ ಆಂಧ್ರಪ್ರದೇಶದ ಬಳಿಕ ಜಾತಿ ಗಣತಿಯನ್ನು ನಡೆಸಲಿರುವ ದೇಶದ ಮೂರನೇ ರಾಜ್ಯವಾಗಲಿದೆ.
‘‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಿರ್ದೇಶನದ ಪ್ರಕಾರ ಈ ಸಮೀಕ್ಷೆಯನ್ನು ನಡೆಸಲಾಗುತ್ತಿದೆ. ಈ ಕುರಿತು ವಿಧಾನಸಭಾ ಚುನಾವಣೆಯ ವೇಳೆ ನೀಡಿದ್ದ ಆಶ್ವಾಸನೆಯನ್ನು ನಾವು ಈಡೇರಿಸುತ್ತಿದ್ದೇವೆ ’’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪೊನ್ನಂ ಪ್ರಭಾಕರ್ ಹೇಳಿದ್ದಾರೆ.
ಹೈದರಾಬಾದ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಜನಸಂಖ್ಯೆಗೆ ಅನುಗುಣವಾಗಿ ಸಮುದಾಯಗಳ ನಡುವೆ ಸಂಪನ್ಮೂಲಗಳು ಸಮಾನವಾಗಿ ಹಂಚಿಕೆಯಾಗುವುದನ್ನು ಖಾತರಿಪಡಿಸಲು ಜನಗಣತಿಯನ್ನು ನಡೆಸಲಾಗುತ್ತಿದೆ. ಜಾತಿಗಣತಿ ಪ್ರಕ್ರಿಯೆಯನ್ನು ನಡೆಸಲು ತೆಲಂಗಾಣ ಸರಕಾರವು 80 ಸಾವಿರ ಸರಕಾರಿ ನೌಕರರನ್ನು ಬಳಸಿಕೊಳ್ಳಲಿದ್ದು, ಅವರಿಗೆ ಸಮೀಕ್ಷೆಯನ್ನು ನಡೆಸುವ ಬಗ್ಗೆ ತರಬೇತಿ ನೀಡಲಾಗುವುದು”, ಎಂದು ತಿಳಿಸಿದ್ದಾರೆ.
ಸೋಮವಾರದಂದು ತೆಲಂಗಾಣದ ಹಿಂದುಳಿದ ವರ್ಗಗಳ ಆಯೋಗವು ಸಂಬಂಧಪಟ್ಟವರ ಅಹವಾಲುಗಳ ಸ್ವೀಕರಿಸಲು ಸಾರ್ವಜನಿಕ ಆಲಿಕೆಗಳನ್ನು ಆರಂಭಿಸಿದೆ. ಒಂದು ವೇಳೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಲ್ಲಿ ರಾಷ್ಟ್ರವ್ಯಾಪಿಯಾಗಿ ಜಾತಿಗಣತಿಯನ್ನು ನಡೆಸಲಾಗುವುದೆಂದು ಪೊನ್ನಂ ಪ್ರಭಾಕರ್ ತಿಳಿಸಿದ್ದಾರೆ.