ತೆಲಂಗಾಣ | ಸಹೋದರನಿಂದಲೇ ಮಹಿಳಾ ಪೇದೆಯ ಕೊಲೆ : ಮರ್ಯಾದಾ ಹತ್ಯೆ ಶಂಕೆ

Update: 2024-12-02 11:40 GMT

ನಾಗಮಣಿ (Photo credit: indiatoday.in)

ಹೈದರಾಬಾದ್ : ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯ ಇಬ್ರಾಹಿಂಪಟ್ಟಣಂ ಮಂಡಲದ ರಾಯಪೋಲ್ ಗ್ರಾಮದಲ್ಲಿ ಅಂತರ್ಜಾತಿ ವಿವಾಹವಾದ ಮಹಿಳಾ ಪೊಲೀಸ್ ಪೇದೆಯೊಬ್ಬರನ್ನು ಆಕೆಯ ಸಹೋದರನೇ ಬರ್ಬರವಾಗಿ ಹತ್ಯೆಗೈದಿದ್ದು, ಮರ್ಯಾದಾ ಹತ್ಯೆ ಶಂಕೆ ವ್ಯಕ್ತವಾಗಿದೆ.

2020ರ ಬ್ಯಾಚ್ ನ ಪೊಲೀಸ್ ಕಾನ್ಸ್ ಟೇಬಲ್ ಆಗಿರುವ ನಾಗಮಣಿ ಅವರು ರಂಗಾ ರೆಡ್ಡಿ ಜಿಲ್ಲೆಯ ಹಯಾತ್‌ ನಗರ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. ಬೇರೆ ಜಾತಿಯ ಶ್ರೀಕಾಂತ್ ಎಂಬಾತನನ್ನು ಪ್ರೀತಿಸುತ್ತಿದ್ದ ನಾಗಮಣಿ ಹದಿನೈದು ದಿನಗಳ ಹಿಂದೆ ವಿವಾಹವಾಗಿದ್ದರು. ಆದರೆ ಈ ಅಂತರ್ಜಾತಿ ವಿವಾಹಕ್ಕೆ ಆಕೆಯ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು.

ನಾಗಮಣಿ ರಾಯಪೋಲ್‌ ನಿಂದ ಮಣ್ಣೇಗೌಡ ಕಡೆಗೆ ಸ್ಕೂಟರ್‌ ನಲ್ಲಿ ಹೋಗುತ್ತಿದ್ದಾಗ ಆಕೆಯ ಸಹೋದರ ಪರಮೇಶ್ ಉದ್ದೇಶಪೂರ್ವಕವಾಗಿ ಆಕೆಯ ಸ್ಕೂಟರ್ ಗೆ ಕಾರಿನಿಂದ ಢಿಕ್ಕಿ ಹೊಡೆದಿದ್ದಾನೆ. ಈ ವೇಳೆ ಬಿದ್ದ ನಾಗಮಣಿ ಮೇಲೆ ಪರಮೇಶ್ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ನಾಗಮಣಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಪ್ರತಿಕ್ರಿಯಿಸಿದ್ದು, ಘಟನೆ ಮರ್ಯಾದೆ ಹತ್ಯೆಯಂತೆ ಕಂಡು ಬರುತ್ತಿದೆ. ನಾಗಮಣಿ ಅಂತರ್ಜಾತಿ ಪ್ರೇಮ ವಿವಾಹವಾಗಿರುವುದರಿಂದ ಆಕೆಯ ಸಹೋದರ ಅಸಮಾಧಾನಗೊಂಡಿದ್ದ. ಈ ಕುರಿತು ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ಪರಮೇಶ್ ಪತ್ತೆಗೆ ತನಿಖೆ ನಡೆಯುತ್ತಿದೆ. ಆಸ್ತಿ ವಿವಾದ ಸೇರಿದಂತೆ ಇತರ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News