ಹರ್ಯಾಣದ ಕೈಥಾಲ್‌ನಲ್ಲಿ ಮಿಹಿರ್‌ ಭೋಜ್‌ ಪ್ರತಿಮೆ ಅನಾವರಣ ವಿವಾದ; ಹಲವು ಬಿಜೆಪಿ ಸದಸ್ಯರ ರಾಜೀನಾಮೆ

Update: 2023-07-21 12:48 GMT

ಮಿಹಿರ್‌ ಭೋಜ್‌ ಪ್ರತಿಮೆ (Photo credit: indiatoday.in)

ಕೈಥಾಲ್‌: ಉತ್ತರ ಭಾರತವನ್ನು ಒಂಬತ್ತನೇ ಶತಮಾನದಲ್ಲಿ ಆಳಿದ್ದ ಮಿಹಿರ್‌ ಭೋಜ್‌ ಎಂಬ ಪ್ರತಿಹಾರ್‌ ರಾಜಪುತ್‌ ವಂಶದ ರಾಜನ ಪ್ರತಿಮೆಯನ್ನು ಹರ್ಯಾಣಾದ ಕೈಥಾಲ್‌ ಎಂಬಲ್ಲಿ ಅನಾವರಣಗೊಳಿಸುವ ವಿಚಾರ ಗುಜ್ಜರ್‌ ಮತ್ತು ರಜಪೂತ ಸಮುದಾಯಗಳ ನಡುವೆ ಉದ್ವಿಗ್ನತೆಗೆ ಕಾರಣವಾಗಿದೆ.

ಈ ಪ್ರತಿಮೆ ಹರ್ಯಾಣ ಶಿಕ್ಷಣ ಸಚಿವ ಕನ್ವರ್‌ಪಾಲ್‌ ಗುಜ್ಜರ್‌ ಅವರಿಂದ ಅನಾವರಣಗೊಳ್ಳಬೇಕಾಗಿದ್ದರೂ ರಜಪೂತ ಸಮುದಾಯದ ವ್ಯಾಪಕ ವಿರೋಧದ ಹಿನ್ನೆಲೆಯಲ್ಲಿ ಅಂತಿಮವಾಗಿ ಬಿಜೆಪಿ ಶಾಸಕ ಲೀಲಾ ರಾಮ್‌ ಗುಜ್ಜರ್‌ ಈ ಪ್ರತಿಮೆಯನ್ನು ಗುರುವಾರ ಬೆಳಿಗ್ಗೆ ಅನಾವರಣಗೊಳಿಸಿದರು. ಪ್ರತಿಭಟನೆಯನ್ನು ಹತ್ತಿಕ್ಕಲು ವ್ಯಾಪಕ ಪೊಲೀಸ್‌ ಬಂದೋಬಸ್ತ್‌ ಕೂಡ ಮಾಡಲಾಗಿತ್ತು.

ಪ್ರತಿಮೆ ಉದ್ಘಾಟನೆ ವೇಳೆ ಮಾತನಾಡಿದ ಬಿಜೆಪಿ ಶಾಸಕ ಲೀಲಾ ರಾಮ್‌, ಸಚಿವರಿಗೆ ಸಭೆಯೊಂದರಲ್ಲಿ ಭಾಗವಹಿಸಲಿದ್ದುದರಿಂದ ಆವರು ಆಗಮಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ನಂತರ ಮಾತನಾಡಿದ ಅವರು ಮಿಹಿರ್‌ ಭೋಜ್‌ ಅರಸ ಗುಜ್ಜರ್‌ ಸಮುದಾಯದ ವಂಶಸ್ಥ ಎಂದು ಹೇಳಿದ್ದಾರೆ. ಈ ಪ್ರತಿಮೆ ಅನಾವರಣ ಕುರಿತು ಯಾವುದೇ ವಿವಾದವಿಲ್ಲ ಎಂದು ಅವರು ಹೇಳಿದ್ದಾರೆ.

ಆದರೆ ಮಿಹಿರ್‌ ಭೋಜ್‌ನನ್ನು ಗುಜ್ಜರ್‌ ಸಮುದಾಯದ ವಂಶಸ್ಥ ಎಂದು ಹೇಳುವುದು ಇತಿಹಾಸದ ತಿರುಚುವಿಕೆ ಎಂದು ರಜಪೂತ ಸಮುದಾಯ ಹೇಳಿಕೊಂಡಿದೆ.

ಇತಿಹಾಸಕಾರರ ಪ್ರಕಾರ ಮಿಹಿರ್‌ ಭೋಜ್‌ ಒಂಬತ್ತನೇ ಶತಮಾನದ ಪ್ರತಿಹಾರ್‌ ರಜಪೂತ ವಂಶಸ್ಥನಾಗಿದ್ದಾನೆ.

ಪ್ರತಿಮೆ ಅನಾವರಣದ ಬೆನ್ನಲ್ಲೇ ಕೈಥಾಲ್‌ ಜಿಲ್ಲೆಯ ಮೂವರು ಬಿಜೆಪಿ ಕೌನ್ಸಿಲರ್‌ಗಳು ಸೇರಿದಂತೆ 29 ಸದಸ್ಯರು ರಾಜೀನಾಮೆ ನೀಡಿದ್ದಾರೆ. ಇತಿಹಾಸ ತಿರುಚಿ ಈ ಪ್ರತಿಮೆ ಅನಾವರಣಗೊಳಿಸಲು ಪಕ್ಷ ಸಹಾಯ ಮಾಡಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ಪತ್ರದಲ್ಲಿ ಅವರು ದೂರಿದ್ದಾರೆ. ಇದೇ ರೀತಿ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ಪಕ್ಷ ಸೋಲು ಕಾಣಲಿದೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News