ಇಬ್ಬರು ಗ್ರಾಮ ರಕ್ಷಕರನ್ನು ಅಪಹರಿಸಿ ಹತ್ಯೆ ಮಾಡಿದ ಉಗ್ರರು
ಶ್ರೀನಗರ; ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಗುರುವಾರ ಉಗ್ರಗಾಮಿಗಳು ಇಬ್ಬರು ಗ್ರಾಮ ರಕ್ಷಕರನ್ನು ಅಪಹರಿಸಿ ಹತ್ಯೆ ಮಾಡಿದ್ದಾರೆ. ಹತ್ಯೆಗೀಡಾದ ನಝೀರ್ ಅಹ್ಮದ್ ಮತ್ತು ಕುಲದೀಪ್ ಕುಮಾರ್ ಅವರು, ಗ್ರಾಮಸ್ಥರನ್ನು ಉಗ್ರರ ಭೀತಿಯಿಂದ ರಕ್ಷಿಸುವ ಸಲುವಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ರಚಿಸಿರುವ ಗ್ರಾಮ ರಕ್ಷಣಾ ಸಮಿತಿಯ ಸದಸ್ಯರಾಗಿದ್ದರು.
ಅಧ್ವರಿ ಪ್ರದೇಶದ ಮುಂಜ್ಲಾಧರ್ ಅರಣ್ಯದಲ್ಲಿ ಈ ಇಬ್ಬರು ದನ ಮೇಯಿಸಲು ಹೋದವರು ವಾಪಸ್ಸಾಗಿರಲಿಲ್ಲ. ಆದ್ದರಿಂದ ಇವರನ್ನು ಅಪಹರಿಸಿರಬೇಕು ಎಂಬ ಆತಂಕ ಮೂಡಿತ್ತು. ಇವರನ್ನು ಅಪಹರಿಸಿರುವುದನ್ನು ಕುಟುಂಬ ಸದಸ್ಯರು ದೃಢಪಡಿಸಿದ್ದಾರೆ. ಉಗ್ರಗಾಮಿಗಳು ತಮ್ಮ ಸಹೋದರ ಮತ್ತು ಅಹ್ಮದ್ ಅವರನ್ನು ಅಪಹರಿಸಿದ್ದಾಗಿ ಕುಲದೀಪ್ ಕುಮಾರ್ ಸಹೋದರ ಪೃಥ್ವಿ ಹೇಳಿದ್ದಾರೆ. ಇಬ್ಬರನ್ನೂ ಉಗ್ರರು ಅಪಹರಿಸಿ ಹತ್ಯೆ ಮಾಡಿರುವ ಬಗ್ಗೆ ಮಾಹಿತಿ ಬಂದಿದೆ. ಎಂದಿನಂತೆ ಇಬ್ಬರೂ ದನ ಮೇಯಿಸಲು ಕಾಡಿಗೆ ಹೋಗಿದ್ದರು ಎಂದು ಪೃಥ್ವಿ ಪಿಟಿಐಗೆ ತಿಳಿಸಿದ್ದಾರೆ.
ಈ ಘಟನೆಯ ಬೆನ್ನಲ್ಲೇ ಸೇನಾ ಸಿಬ್ಬಂದಿ ಹಾಗೂ ಪೊಲೀಸರು ದಟ್ಟ ಅರಣ್ಯದ ನಡುವೆ ದೊಡ್ಡ ಪ್ರಮಾಣದ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದರು. ಪಾಕಿಸ್ತಾನ ಮುಲದ ಜೈಶ್ ಇ ಮೊಹ್ಮದ್ ಸಂಘಟನೆಯ ಘಟಕ ಎನಿಸಿದ ಕಾಶ್ಮೀರ್ ಟೈಗರ್ಸ್ ಸಂಘಟನೆ ಈ ಹತ್ಯೆಯನ್ನು ತಾನೇ ಮಾಡಿದ್ದಾಗಿ ಘೋಷಿಸಿದೆ.
ಶ್ರೀನಗರದ ಸಂಡೇ ಮಾರ್ಕೆಟ್ ನಲ್ಲಿ ಗ್ರೆನೇಡ್ ದಾಳಿ ನಡೆದು 12 ಮಂದಿ ಗಾಯಗೊಂಡ ಘಟನೆ ಸಂಭವಿಸಿದ ಕೆಲವೇ ದಿನಗಳಲ್ಲಿ ಈ ಕ್ರೂರ ಹತ್ಯೆ ನಡೆದಿದೆ.