“ಸದನ ನಿಷ್ಕ್ರಿಯಗೊಳಿಸುವ ಪ್ರಯತ್ನ ದುರದೃಷ್ಟಕರ”: ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಪತ್ರ ಬರೆದ ಜಗದೀಪ್ ಧನಕರ್

Update: 2023-12-22 15:43 GMT

ಜಗದೀಪ್ ಧನಕರ್ | Photo: PTI 

ಹೊಸದಿಲ್ಲಿ: ಸದನ ನಡೆಸಲು ಸಮ್ಮತಿ ಇಲ್ಲ ಎಂದು ಪೀಠಕ್ಕೆ ಬೇಡಿಕೆ ಸಲ್ಲಿಸುವ ಮೂಲಕ ಸದನವನ್ನು ನಿಷ್ಕ್ರಿಯಗೊಳಿಸುವ ಪ್ರಯತ್ನ ದುರದೃಷ್ಟಕರ. ಇದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾದುದು ಎಂದು ರಾಜ್ಯ ಸಭಾಧ್ಯಕ್ಷ ಜಗದೀಪ್ ಧನಕರ್ ಅವರು ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಸಂಸತ್ತಿನ ಚಳಿಗಾಲದ ಅಧಿವೇಶನದ ಸಂದರ್ಭ ತನ್ನನ್ನು ಭೇಟಿಯಾಗಲು ಕಾಂಗ್ರೆಸ್ ನಾಯಕರು ನಿರಾಕರಿಸುತ್ತಿರುವುದು ಉತ್ತಮ ಸಂಸದೀಯ ನಡೆಯಲ್ಲ. ಈ ಕುರಿತು ಚರ್ಚಿಸಲು ಬಯಸುವುದಾಗಿ ಅವರು ಪತ್ರದಲ್ಲಿ ಹೇಳಿದ್ದಾರೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ.

ರಾಜ್ಯ ಸಭೆಯ ಅಧಿವೇಶನವನ್ನು ಗುರುವಾರ ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿತ್ತು. ಅದಾದ ಒಂದು ದಿನದ ಬಳಿಕ ಧನಕರ್ ಅವರು ಈ ಪತ್ರ ಬರೆದಿದ್ದಾರೆ.

ಡಿಸೆಂಬರ್ 13ರಂದು ಸಂಸತ್ತಿನ ಭದ್ರತಾ ಉಲ್ಲಂಘನೆ ಕುರಿತಂತೆ ಚರ್ಚೆ ನಡೆಸುವಂತೆ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಹೇಳಿಕೆ ನೀಡುವಂತೆ ಆಗ್ರಹಿಸಿ ಪ್ರತಿಪಕ್ಷದ ಸಂಸದರ ಪುನರಾವರ್ತಿತ ಪ್ರತಿಭಟನೆಗೆ ರಾಜ್ಯ ಸಭೆ ಸಾಕ್ಷಿಯಾಗಿದೆ. ಈ ಪ್ರತಿಭಟನೆ ರಾಜ್ಯ ಸಭೆಯ 46 ಸಂಸದರ ಅಮಾನತಿಗೆ ಕಾರಣವಾಗಿದೆ.

ತೃಣಮೂಲ ಕಾಂಗ್ರೆಸ್ ನ ಸಂಸದ ಡೆರಿಕ್ ಒಬ್ರಿಯಾನ್ ವಿರುದ್ಧ ವಿಶೇಷಾಧಿಕಾರ ಉಲ್ಲಂಘನೆ ಆರೋಪ ಮಾಡಲಾಗಿದ್ದು, ಪ್ರಕರಣವನ್ನು ಹಕ್ಕು ಬಾಧ್ಯತಾ ಸಮಿತಿಗೆ ಒಪ್ಪಿಸಲಾಗಿದೆ.

ಸದನದ ಕಲಾಪ ಸುಗಮವಾಗಿ ನಡೆಯಲು ಖರ್ಗೆ ಅವರೊಂದಿಗೆ ಮಾತುಕತೆ ನಡೆಸಲು ನಿರ್ಧರಿಸಿದ್ದೆ. ಆದರೆ, ಕಾಂಗ್ರೆಸ್ ನಾಯಕರು ಸರಿಯಾದ ಸಹಕಾರ ನೀಡಲಿಲ್ಲ ಎಂದು ಧನಕರ್ ಅವರು ನೋವು ವ್ಯಕ್ತಪಡಿಸಿದ್ದಾರೆ ಎಂದು ಪತ್ರವನ್ನು ಉಲ್ಲೇಖಿಸಿ ಮೂಲಗಳು ತಿಳಿಸಿವೆ.

ಸಂಸದೀಯ ಕಾರ್ಯ ವಿಧಾನದ ಪ್ರಕಾರ ಸಭಾಧ್ಯಕ್ಷರೊಂದಿಗೆ ಸಂವಹನ ಅತಿ ಮುಖ್ಯವಾಗಿದೆ. ಸದನದ ಕಲಾಪ ಸುಗಮವಾಗಿ ನಡೆಯಲು ಪ್ರತಿಪಕ್ಷಗಳ ನಾಯಕರೊಂದಿಗೆ ಸಂವಾದವನ್ನು ಎದುರು ನೋಡುತ್ತಿದ್ದೇನೆ ಎಂದು ಧನಕರ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News