ಸಶಸ್ತ್ರ ಪಡೆಗಳಲ್ಲಿ ಸಿಬ್ಬಂದಿ ಕೊರತೆ ಕುರಿತ ಮಾಹಿತಿ ಹಂಚಿಕೊಳ್ಳಲು ನಿರಾಕರಿಸಿದ ಕೇಂದ್ರ ಸರಕಾರ

Update: 2024-08-07 11:08 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಸಶಸ್ತ್ರ ಪಡೆಗಳಲ್ಲಿ ಸಿಬ್ಬಂದಿ ಕೊರತೆಯ ಕುರಿತು ಮಾಹಿತಿಯನ್ನು ಹಂಚಿಕೊಳ್ಳಲು ರಕ್ಷಣಾ ಸಚಿವಾಲಯವು ನಿರಾಕರಿಸಿದೆ.

ಸಹಾಯಕ ರಕ್ಷಣಾ ಸಚಿವ ಸಂಜಯ ಸೇಠ್ ಅವರು ರಾಜ್ಯಸಭೆಯಲ್ಲಿ ತೆಲಂಗಾಣದ ಸಂಸದ ಅನಿಲ್ ಕುಮಾರ್ ಯಾದವ್ ಮಂದಾಡಿ ಅವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ,ಕೋರಲಾಗಿರುವ ಮಾಹಿತಿಯು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಕಾರ್ಯಾಚರಣೆ ವಿಷಯವಾಗಿದೆ ಮತ್ತು ಸಂಬಂಧಿಸಿದ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸುವುದು ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಲ್ಲ ಎಂದು ತಿಳಿಸಿದರು.

ಮಂದಾಡಿ ಖಾಲಿ ಹುದ್ದೆಗಳ ಭರ್ತಿಗೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತೂ ಮಾಹಿತಿ ಕೋರಿದ್ದರು.

ಐತಿಹಾಸಿಕವಾಗಿ ಸಶಸ್ತ್ರ ಪಡೆಗಳಲ್ಲಿ ಖಾಲಿ ಹುದ್ದೆಗಳು ಮತ್ತು ಸಿಬ್ಬಂದಿ ಕೊರತೆ ಕುರಿತು ಮಾಹಿತಿಗಳನ್ನು ನಿಯಮಿತವಾಗಿ ಒದಗಿಸಲಾಗುತ್ತಿದೆ. ಮಾರ್ಚ್ 2023ರಲ್ಲಿ ಎಸ್‌ಪಿ ಸಂಸದ ಜಾವೇದ್ ಅಲಿ ಖಾನ್ ಅವರ ಪ್ರಶ್ನೆಗೆ ಉತ್ತರಿಸಿದ್ದ ಆಗಿನ ಸಹಾಯಕ ರಕ್ಷಣಾ ಸಚಿವ ಅಜಯ ಭಟ್ ಅವರು,ಅಧಿಕಾರಿಗಳ 8070 ಹಾಗೂ ಜ್ಯೂನಿಯರ್ ಕಮಿಷನ್ಡ್ ಅಧಿಕಾರಿಗಳು ಮತ್ತು ಇತರ ಶ್ರೇಣಿಗಳಲ್ಲಿ 1,27,673 ಹುದ್ದೆಗಳು ಖಾಲಿಯಿವೆ ಎಂದು ತಿಳಿಸಿದ್ದರು.

ಮಾಹಿತಿಯನ್ನು ತಡೆ ಹಿಡಿದ ರಕ್ಷಣಾ ಸಚಿವಾಲಯದ ನಿರ್ಧಾರವನ್ನು ಟೀಕಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ಸರಕಾರವು ಈ ಹಿಂದೆ ಸಶಸ್ತ್ರ ಪಡೆಗಳಲ್ಲಿ ಸಿಬ್ಬಂದಿ ಕೊರತೆಯ ಕುರಿತು ಮಾಹಿತಿಗಳನ್ನು ಒದಗಿಸಿದೆ ಎಂದು ಹೇಳಿದ್ದಾರೆ.

ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಸಶಸ್ತ್ರ ಪಡೆಗಳಿಗೆ ನೇಮಕಾತಿಗಳನ್ನು ಸ್ಥಗಿತಗೊಳಿಸಲಾಗಿತ್ತು,ಆದರೆ ನಿವೃತ್ತಿಗಳು ಮುಂದುವರಿದ್ದವು. ಇದು ಸಿಬ್ಬಂದಿಗಳ ಕೊರತೆ ಉಲ್ಬಣಿಸಲು ಕಾರಣವಾಗಿದೆ.

ಗಮನಾರ್ಹವಾಗಿ,2026ರವರೆಗೆ ಸೀಮಿತ ಸಂಖ್ಯೆಯಲ್ಲಿ ನೇಮಕಾತಿ ಮಾಡಿಕೊಳ್ಳಲು ಯೋಜಿಸಲಾಗಿದ್ದು,ಇದರಿಂದಾಗಿ ಸೈನಿಕ ಮಟ್ಟದಲ್ಲಿ ಸಿಬ್ಬಂದಿಗಳ ಸಂಖ್ಯೆಯಲ್ಲಿ ಕುಸಿತ ಮುಂದುವರಿಯುವ ನಿರೀಕ್ಷೆಯಿದೆ.

2022 ಮತ್ತು 2026ರ ನಡುವಿನ ಅವಧಿಯಲ್ಲಿ ಅಗ್ನಿಪಥ ಯೋಜನೆಯಡಿ ಸುಮಾರು 1.75 ಲಕ್ಷ ಅಗ್ನಿವೀರರನ್ನು ನೇಮಕ ಮಾಡಿಕೊಳ್ಳುವ ನಿರೀಕ್ಷೆಯಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News