ಪ್ರಣಬ್ ಮುಖರ್ಜಿ ಸಮಾಧಿ ಪಕ್ಕದಲ್ಲೇ ಡಾ.ಸಿಂಗ್ ಸ್ಮಾರಕಕ್ಕೆ ಜಾಗ ಗುರುತಿಸಿದ ಸರ್ಕಾರ

Update: 2025-01-16 02:29 GMT

PC: x.com/mr_mayank

ಹೊಸದಿಲ್ಲಿ: ರಾಷ್ಟ್ರೀಯ  ಸ್ಮೃತಿ ಸಂಕೀರ್ಣದಲ್ಲಿ ಮಾಜಿ ರಾಷ್ಟ್ರಪತಿ ದಿವಂಗತ ಪ್ರಣಬ್ ಮುಖರ್ಜಿಯವರ ಸಮಾಧಿ ಸ್ಥಳಕ್ಕೆ ಹೊಂದಿಕೊಂಡಂತೆ 1.5 ಎಕರೆ ವಿಸ್ತೀರ್ಣದ ಜಾಗದಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರ ಸ್ಮಾರಕ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಜಾಗ ಗುರುತಿಸಿದೆ.

ಕೇಂದ್ರ ಸರ್ಕಾರದ ಗೃಹ ನಿರ್ಮಾಣ ಮತ್ತು ನಗರ ವ್ಯವಹಾರಗಳ ಸಚಿವಾಲಯ ಈ ನಿರ್ಧಾರವನ್ನು ಡಾ.ಸಿಂಗ್ ಕುಟುಂಬಕ್ಕೆ ತಿಳಿಸಿದ್ದು, ಸಾರ್ವಜನಿಕ ಭೂಮಿಯ ಹಂಚಿಕೆಗೆ ಕಡ್ಡಾಯವಾಗಿರುವ ಟ್ರಸ್ಟ್ ರಚನೆ ಮಾಡುವಂತೆ ಕುಟುಂಬಕ್ಕೆ ಸೂಚಿಸಿದೆ. ಟ್ರಸ್ಟ್ ರಚನೆ ಮೂಲಕ ಇತರ ವಿಧಿವಿಧಾನಗಳನ್ನು ಪೂರ್ಣಗೊಳಿಸಬಹುದು ಎಂದು ಸಲಹೆ ಮಾಡಿದೆ.

ಡಾ.ಸಿಂಗ್ ಅವರ ಸ್ಮಾರಕವನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದ ಬಳಿಕ ಸರ್ಕಾರಿ ಅಧಿಕಾರಿಗಳು ರಾಷ್ಟ್ರೀಯ ಸ್ಮೃತಿ ಸ್ಥಳ ಆವರಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಸ್ಥಳ ಪರಿಶೀಲನೆಗಾಗಿ ಸಿಂಗ್ ಕುಟುಂಬಕ್ಕೂ ಮನವಿ ಮಾಡಲಾಗಿದ್ದು, ಇನ್ನೂ ಪರಿಶೀಲನೆ ನಡೆಸಿಲ್ಲ ಎಂದು ಮೂಲಗಳು ಹೇಳಿವೆ. ಕುಟುಂಬ ಇನ್ನೂ ಶೋಕದಲ್ಲಿ ಇರುವುದರಿಂದ ಸರ್ಕಾರದ ಆಫರ್ ಬಗ್ಗೆ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಲಾಗಿದೆ.

ಯಾವ ಬಗೆಯ ಸ್ಮಾರಕವನ್ನು ಸಿಂಗ್ ಸ್ಮರಣಾರ್ಥ ನಿರ್ಮಿಸಬೇಕು ಎಂಬ ಬಗ್ಗೆ ಕುಟುಂಬ ಇದೀಗ ಚರ್ಚೆಯಲ್ಲಿ ತೊಡಗಿದ್ದು, ಈ ಬಗ್ಗೆ ನಿರ್ಧಾರಕ್ಕೆ ಬಂದ ಬಳಿಕ ಸರ್ಕಾರಕ್ಕೆ ಮಾಹಿತಿ ನೀಡಲಾಗುವುದು ಎಂದು ಕುಟುಂಬ ಸದಸ್ಯರೊಬ್ಬರು ಹೇಳಿದ್ದಾರೆ.

ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಹಾಗೂ ಮಾಜಿ ರಾಷ್ಟ್ರಪತಿ, ಮಾಜಿ ಪ್ರಧಾನಿ, ಮಾಜಿ ಉಪರಾಷ್ಟ್ರಪತಿಗಳ ಅಂತ್ಯಸಂಸ್ಕಾರಕ್ಕಾಗಿ ಯಮುನಾ ನದಿ ದಂಡೆಯಲ್ಲಿ ರಾಷ್ಟ್ರೀಯ ಸ್ಮೃತಿ ಸ್ಥಳವನ್ನು ಅಭಿವೃದ್ಧಿಪಡಿಸಲಾಗಿದೆ. ಇದೀಗ ಅಟಲ್ ಬಿಹಾರಿ ವಾಜಪೇಯಿ, ಪಿ.ವಿ.ನರಸಿಂಹ ರಾವ್, ಚಂದ್ರಶೇಖರ್, ಐ.ಕೆ.ಗುಜ್ರಾಲ್ ಅವರ ಸ್ಮಾರಕಗಳು ಸೇರಿದಂತೆ ಇಲ್ಲಿ ಒಟ್ಟು ಏಳು ಸ್ಮಾರಕಗಳಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News