ಮುಂಗೇರ್ ನಲ್ಲಿ ಮರುಮತದಾನಕ್ಕೆ ಕೋರಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ : ಬಿಹಾರದ ಮುಂಗೇರ್ ಲೋಕಸಭಾ ಕ್ಷೇತ್ರದ ಕೆಲವು ಮತಗಟ್ಟೆಗಳಲ್ಲಿ ಮರುಮತದಾನ ನಡೆಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ರಾಷ್ಟ್ರೀಯ ಜನತಾ ದಳ (RJD)ದ ಅಭ್ಯರ್ಥಿ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಮುಂಗೇರ್ ಲೋಕಸಭಾ ಕ್ಷೇತ್ರದಲ್ಲಿ ನಾಲ್ಕನೇ ಹಂತದಲ್ಲಿ ಮೇ 13ರಂದು ಮತದಾನ ನಡೆದಿತ್ತು.
ಈ ಕ್ಷೇತ್ರದ ಕೆಲವು ಮತಗಟ್ಟೆಗಳನ್ನು ಸಂಯುಕ್ತ ಜನತಾ ದಳ (ಜೆಡಿಯು)ದ ಕಾರ್ಯಕರ್ತರು ವಶಪಡಿಸಿಕೊಂಡಿದ್ದರು ಎಂದು ಅರ್ಜಿದಾರೆ ಕುಮಾರಿ ಅನಿತಾ ಆರೋಪಿಸಿದ್ದಾರೆ. ಅವರಿಗೆ ಸರಕಾರಿ ಅಧಿಕಾರಿಗಳು ಸಹಾಯ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ. ಜೆಡಿಯು ಬಿಹಾರದ ಆಡಳಿತಾರೂಢ ಮೈತ್ರಿಕೂಟದ ಘಟಕ ಪಕ್ಷವಾಗಿದೆ. ಅದೂ ಅಲ್ಲದೆ, ತುಳಿತಕ್ಕೊಳಗಾದ ಸಮುದಾಯಗಳ ಜನರಿಗೆ ಮತ ಹಾಕಲು ಅವಕಾಶ ನಿರಾಕರಿಸಲಾಗಿದೆ ಎಂಬುದಾಗಿಯೂ ಅವರು ಆರೋಪಿಸಿದ್ದಾರೆ.
ಶುಕ್ರವಾರ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮ ಮತ್ತು ಪ್ರಸನ್ನ ಬಿ. ವರಾಳೆ ಅವರನ್ನೊಳಗೊಂಡ ನ್ಯಾಯಪೀಠವೊಂದು, ಅರ್ಜಿದಾರರು ಮೊದಲು ಹೈಕೋರ್ಟ್ಗೆ ಹೋಗಬೇಕಾಗಿತ್ತು ಎಂದು ಹೇಳಿದೆ.
‘‘ಈ ಅರ್ಜಿಯನ್ನು ವಜಾಗೊಳಿಸಲಾಗಿದೆ. ಕ್ಷಮಿಸಿ’’ ಎಂದು ನ್ಯಾಯಾಲಯ ಹೇಳಿತು.
ಅರ್ಜಿಯ ವಿಚಾರಣಾ ಅರ್ಹತೆಯನ್ನು ನಿರ್ಧರಿಸಲು ನ್ಯಾಯಾಲಯವು ಹೋಗುವುದಿಲ್ಲ ಎಂದು ನ್ಯಾ. ಶರ್ಮ, ಅನಿತಾ ಪರವಾಗಿ ಹಾಜರಾದ ವಕೀಲ ಆಲ್ಜೊ ಜೋಸೆಫ್ರಿಗೆ ತಿಳಿಸಿತು.
‘‘ಹೈಕೋರ್ಟ್ನ ನಿರಾಕರಣಾ ಆದೇಶ ಎಲ್ಲಿದೆ? ನೀವು ಹೈಕೋರ್ಟ್ ಗೆ ಯಾಕೆ ಹೋಗುವುದಿಲ್ಲ? ಈ ದೇಶದಲ್ಲಿ ಹೈಕೋರ್ಟ್ ಗಳನ್ನು ಮುಚ್ಚಲಾಗಿಲ್ಲ. ದಯವಿಟ್ಟು ಹೈಕೋರ್ಟ್ ಗೆ ಹೋಗಿ ಮತ್ತು ಇದೆಲ್ಲವನ್ನೂ ಅದರ ಮುಂದೆ ವಾದಿಸಿ’’ ಎಂದು ಅವರು ಹೇಳಿದರು.
ಭಾರತೀಯ ಚುನಾವಣಾ ಆಯೋಗದ ವೀಕ್ಷಕರು ಮತ್ತು ಜಿಲ್ಲಾ ಚುನಾವಣಾಧಿಕಾರಿ ಅವನೀಶ್ ಕುಮಾರ್ ಸಿಂಗ್ ಸೇರಿದಂತೆ ಈ ವಿಷಯದಲ್ಲಿ ಅಧಿಕಾರಿಗಳಿಗೆ ನಾನು ದೂರು ನೀಡಿದ್ದೇನೆ, ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಅನಿತಾ ನ್ಯಾಯಾಲಯದಲ್ಲಿ ಹೇಳಿದರು.
ಮತಗಟ್ಟೆ ವಶೀಕರಣದ ವಿರುದ್ಧ ಪ್ರತಿಭಟಿಸಲು ಮುಂದಾದಾಗ ಜೆಡಿಯು ಸದಸ್ಯರು ಮತ್ತು ಕೆಲವು ಅಧಿಕಾರಿಗಳು ನನ್ನ ಮೇಲೆ ಹಲ್ಲೆ ನಡೆಸಿದರು ಎಂಬುದಾಗಿಯೂ ಅವರು ಆರೋಪಿಸಿದ್ದಾರೆ.