ಮಕ್ಕಳ ದೇವಿ ಸಾವಿತ್ರಿಬಾಯಿ ಎಂದು ಹೇಳಿದ್ದ ಶಿಕ್ಷಕಿ ಅಮಾನತು ; 600 ಕಿ.ಮೀ. ದೂರದ ಶಾಲೆಗೆ ವರ್ಗಾವಣೆ

Update: 2024-02-28 16:31 GMT

ಸಾವಿತ್ರಿಬಾಯಿ ಫುಳೆ | Photo: indiatoday.in

ಜೈಪುರ : ಸರಸ್ವತಿ ದೇವಿಗಿಂತ ನಮಗೆ ಸಾವಿತ್ರಿಬಾಯಿ ಫುಳೆ, ಮಹಾತ್ಮಾ ಗಾಂಧಿ ಮತ್ತು ಅಂಬೇಡ್ಕರ್ ಮುಖ್ಯ ಎಂದು ಪ್ರತಿಪಾದಿಸಿರುವ ರಾಜಸ್ಥಾನದ ಸರಕಾರಿ ಶಾಲೆಯ ದಲಿತ ಶಿಕ್ಷಕಿಯನ್ನು ಅಮಾನತುಗೊಳಿಸಿ ದೂರದ ಊರಿಗೆ ವರ್ಗಾಯಿಸಲಾಗಿದೆ.

ರಾಜಸ್ಥಾನದ ಬರಣ್ ಜಿಲ್ಲೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಆ ವೀಡಿಯೊದಲ್ಲಿ 40 ವರ್ಷದ ಹೇಮಲತಾ ಬೈರ್ವ ಮಹಾತ್ಮಾ ಗಾಂಧಿ, ಸಾವಿತ್ರಿಬಾಯಿ ಫುಳೆ ಮತ್ತು ಬಿ.ಆರ್. ಅಂಬೇಡ್ಕರ್ ಹಾರ ಹಾಕಿದ ಚಿತ್ರಗಳ ಮುಂದೆ ನಿಂತು ಗುಂಪೊಂದರ ಜೊತೆ ವಾದಿಸುತ್ತಿರುವುದನ್ನು ಕಾಣಬಹುದಾಗಿದೆ.

‘‘ಮಕ್ಕಳ ದೇವಿ ಸರಸ್ವತಿ’’ ಎಂಬುದಾಗಿ ಗುಂಪು ವಾದಿಸುತ್ತಿತ್ತು. ಅದಕ್ಕೆ ಉತ್ತರಿಸಿದ ಹೇಮಲತಾ, ‘‘ಮಕ್ಕಳ ದೇವಿ ಸಾವಿತ್ರಿಬಾಯಿ ಫುಳೆ ಆಗಿದ್ದಾರೆ’’ ಎಂದು ವಾದಿಸಿದ್ದರು.

ಹಿಂದೂ ದೇವಿ ಸರಸ್ವತಿಗೆ ಪೂಜೆ ಮಾಡಿ ಎಂದು ಗುಂಪು ಒತ್ತಾಯಿಸಿದಾಗ, ಶಿಕ್ಷಕಿಯು ನಿರಾಕರಿಸಿದ್ದರು. ಆಗ ಗುಂಪಿನಲ್ಲಿದ್ದ ವ್ಯಕ್ತಿಗಳು ಶಾಲೆಯ ಎದುರು ನಿಂತು, ಕಾರ್ಯಕ್ರಮವನ್ನು ಹೇಗೆ ಮುಂದುವರಿಸುತ್ತೀರಿ ಎಂದು ನೋಡುತ್ತೇವೆ ಎಂಬುದಾಗಿ ಸವಾಲು ಹಾಕಿದ್ದರು.

‘‘ದೀಪ ಯಾಕೆ ಹೊತ್ತಿಸಿಲ್ಲ? ಹಿಂದೂ ಸಂಸ್ಕೃತಿಯ ಬಗ್ಗೆ ಶಿಕ್ಷಕಿಗೆ ಗೊತ್ತಿಲ್ಲವೇ?’’ ಎಂದು ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಕೇಳುವುದನ್ನು ವೀಡಿಯೊ ತೋರಿಸುತ್ತದೆ. ಅದಕ್ಕೆ ಉತ್ತರಿಸಿದ ಹೇಮಲತಾ, ‘‘ಹಿಂದೂವಿನ ಅರ್ಥವೇನು? ಹಿಂದೂ, ಮುಸ್ಲಿಮ್, ಸಿಖ್, ಕ್ರೈಸ್ತ ಎಲ್ಲರೂ ಇಲ್ಲಿ ಸಮಾನರು’’ ಎಂದು ಹೇಳುತ್ತಾರೆ.

ಆ ಬಳಿಕ, ಧಾರ್ಮಿಕ ಭಾವನೆಗಳಿಗೆ ಘಾಸಿ ಮಾಡಿರುವುದಕ್ಕಾಗಿ ಅವರ ವಿರುದ್ಧ ಎರಡು ಎಫ್ಐರ್ ಗಳು ದಾಖಲಾಗಿದ್ದವು.

ಒಂದು ತಿಂಗಳ ಬಳಿಕ, ಸಚಿವ ಮದನ್ ದಿಲಾವರ್ ರ ಆದೇಶದಂತೆ ರಾಜ್ಯ ಶಿಕ್ಷಣ ಇಲಾಖೆಯು ಶಿಕ್ಷಕಿಯನ್ನು ಅಮಾನತುಗೊಳಿಸಿ ಬಿಕಾನೆರ್ ಗೆ ವರ್ಗಾಯಿಸಿದೆ. ಶಿಕ್ಷಕಿಯ ಮನೆಯಿಂದ ಬಿಕಾನೆರ್ 600 ಕಿ.ಮೀ. ದೂರದಲ್ಲಿದೆ.

ಇದರ ವಿರುದ್ಧ ದಲಿತ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿವೆ. ಶಿಕ್ಷಕಿಯ ಅಮಾನತು ಮತ್ತು ವರ್ಗಾವಣೆಯನ್ನು ಹಿಂಪಡೆಯಬೇಕು ಮತ್ತು ಸಚಿವರು ರಾಜೀನಾಮೆ ನೀಡಬೇಕು ಎಂದು ಅವುಗಳು ಒತ್ತಾಯಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News