ಇ.ಡಿ. ಅಧಿಕಾರಿಗಳ ಮೇಲೆ ಗುಂಪು ಹಲ್ಲೆ: ಮೂವರಿಗೆ ಗಾಯ
ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್ ನಾಯಕನ ಮನೆ ಮೇಲೆ ಪಡಿತರ ಹಗರಣದ ತನಿಖೆ ಅಂಗವಾಗಿ ದಾಳಿ ನಡೆಸಿದ ಕಾನೂನು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ 200 ಮಂದಿಯ ಗುಂಪು ಹಲ್ಲೆ ನಡೆಸಿದ ಘಟನೆಯಲ್ಲಿ ಮೂವರು ಗಾಯಗೊಂಡ ಘಟನೆ ಬಂಗಾಳದ ನಾರ್ತ್ 24 ಪರಗಣ ಜಿಲ್ಲೆಯ ಸಂದೇಶ್ ಖಾಳಿ ಎಂಬಲ್ಲಿ ನಡೆದಿದೆ.
ಸಿಆರ್ ಪಿಎಫ್ ಹಾಗೂ ಜಾರಿ ನಿರ್ದೇಶನಾಲಯಕ್ಕೆ ಸೇರಿದ ವಾಹನಗಳು ದಾಳಿಯಲ್ಲಿ ಜಖಂಗೊಂಡಿವೆ. ಇಟ್ಟಿಗೆ ಹಾಗೂ ದೊಣ್ಣೆಯೊಂದಿಗೆ ಬಂದ ಗ್ರಾಮಸ್ಥರ ದಾಳಿಯಿಂದ ತಪ್ಪಿಸಿಕೊಂಡು ಎಂಟು ಮಂದಿ ಇ.ಡಿ. ಅಧಿಕಾರಿಗಳು ಹಾಗೂ ಜತೆಗಿದ್ದ ಸಿಆರ್ ಪಿಎಫ್ ಸಿಬ್ಬಂದಿ ಆಟೋರಿಕ್ಷಾ, ಬಂಗಾಳ ಪೊಲೀಸ್ ವಾಹನ ಹಾಗೂ ಗ್ರಾಮಸ್ಥರ ಬೈಕ್ ಗಳಲ್ಲಿ ತೆರಳಿ ತಪ್ಪಿಸಿಕೊಂಡರು.
ಸಂದೇಶ್ ಖಾಳಿ ಠಾಣೆಯಲ್ಲಿ ದಾಖಲಾಗಿರುವ ಎಫ್ ಐಆರ್ ಪ್ರಕಾರ, ಮಾಧ್ಯಮ ವಾಹನಗಳನ್ನು ಕೂಡಾ ಗುರಿ ಮಾಡಲಾಗಿತ್ತು. ಎರಡು ಟಿವಿ ಚಾನೆಲ್ ಸಿಬ್ಬಂದಿ ಕೂಡಾ ಗಾಯಗೊಂಡಿದ್ದಾರೆ. ಅಧಿಕಾರಿಗಳು ದಾಳಿ ನಡೆಸಿದ ಮನೆ ಟಿಎಂಸಿ ಸಂದೇಶ್ ಖಾಳಿ ಬ್ಲಾಕ್-1ರ ಅಧ್ಯಕ್ಷ ಶೇಕ್ ಶಹಜಹಾನ್ ಅವರಿಗೆ ಸೇರಿದ್ದು, ದಾಳಿ ವೇಳೆ ಅವರು ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ.
ದಾಳಿ ನಡೆದ 12 ಗಂಟೆ ಬಳಿಕ ಇ.ಡಿ. ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಶಹಜಹಾನ್ ದಾಳಿಯ ವೇಳೆ ಮನೆಯಲ್ಲಿದ್ದರು. ಮನೆಯನ್ನು ಒಳಗಿನಿಂದ ಬೀಗ ಹಾಕಿಕೊಂಡಿದ್ದು, ಬಾಗಿಲು ತೆರೆಯಲು ನಿರಾಕರಿಸಿದ್ದರು. ಅವರ ಮೊಬೈಲ್ ಲೊಕೇಶನ್, ಅವರು ಮನೆಯ ಒಳಗಿದ್ದಾರೆ ಎನ್ನುವುದನ್ನು ತೋರಿಸುತ್ತಿತ್ತು ಎಂದು ಇ.ಡಿ. ಅಧಿಕಾರಿಗಳು ಹೇಳಿದ್ದಾರೆ.
ಇದು ಒಕ್ಕೂಟ ವ್ಯವಸ್ಥೆಯ ಮೇಲೆ ನಡೆದ ದಾಳಿ ಎಂದು ಗೃಹಖಾತೆ ರಾಜ್ಯ ಸಚಿವ, ಬಿಜೆಪಿ ಮುಖಂಡ ನಿತೀಶ್ ಪ್ರಾಮಾಣಿಕ್ ಪ್ರತಿಕ್ರಿಯಿಸಿದ್ದಾರೆ. ಭವಿಷ್ಯದಲ್ಲಿ ಇಂಥ ದಾಳಿಯನ್ನು ತಡೆಯಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಅವರು ಭರವಸೆ ನೀಡಿದ್ದಾರೆ.