ವೈದ್ಯೆಗೆ ಕಿರುಕುಳ ನೀಡಿದ ವ್ಯಕ್ತಿಯನ್ನು ಬಂಧಿಸಲು ಆಸ್ಪತ್ರೆ ವಾರ್ಡ್ ನೊಳಕ್ಕೇ ಕಾರು ನುಗ್ಗಿಸಿದ ಪೊಲೀಸರು!
ರಿಷಿಕೇಶ್: ಆರೋಪಿಯೊಬ್ಬನನ್ನು ಬಂಧಿಸಲು ಪೊಲೀಸರು ರಿಷಿಕೇಶದ ಏಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ತಮ್ಮ ಕಾರನ್ನು ಅನ್ನು ನುಗ್ಗಿಸಿರುವ ಘಟನೆ ನಡೆದಿದೆ. ಈ ಘಟನೆಯ ವಿಡಿಯೊ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವೈದ್ಯೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ನರ್ಸಿಂಗ್ ಅಧಿಕಾರಿಯೊಬ್ಬನನ್ನು ಬಂಧಿಸಲು ಪೊಲೀಸರು ಕಾರನ್ನು ಆಸ್ಪತ್ರೆಯೊಳಗೆ ನುಗ್ಗಿಸಿದ್ದಾರೆ.
26 ಸೆಕೆಂಡುಗಳ ಈ ವಿಡಿಯೊ ತುಣುಕಿನಲ್ಲಿ ಸಾಹಸಮಯ ಸಿನಿಮಾಗಳಲ್ಲಿ ಕಂಡು ಬರುವ ದೃಶ್ಯಗಳಂತೆ ತಮ್ಮ ಕಾರನ್ನು ಕಿಕ್ಕಿರಿದು ನೆರೆದಿದ್ದ ತುರ್ತು ನಿಗಾ ಘಟಕದೊಳಗೆ ಪೊಲೀಸರು ನುಗ್ಗಿಸಿದ್ದಾರೆ. ಈ ಸಂದರ್ಭದಲ್ಲಿ ಕಾರಿನ ಎರಡೂ ಬದಿಯಲ್ಲಿ ರೋಗಿಗಳು ಹಾಸಿಗೆಗಳ ಮೇಲೆ ಮಲಗಿರುವುದು ಕಂಡು ಬಂದಿದೆ. ಭದ್ರತಾ ಅಧಿಕಾರಿಗಳ ಗುಂಪೊಂದು ಕಾರು ಒಳಗೆ ಪ್ರವೇಶಿಸಲು ರೋಗಿಗಳನ್ನು ಕರೆದೊಯ್ಯುತ್ತಿರುವ ಸ್ಟ್ರೆಚರ್ ಗಳನ್ನು ದಾರಿಯಿಂದ ಆಚೆ ದೂಡುತ್ತಿರುವುದು ಕೂಡಾ ಕಂಡು ಬಂದಿದೆ. ಹಲವಾರು ಪೊಲೀಸ್ ಅಧಿಕಾರಿಗಳನ್ನು ಒಳಗೊಂಡಿರುವ ಆ ಕಾರು ವಾರ್ಡ್ ನೊಳಗೆ ಪ್ರವೇಶಿಸುವುದೂ ಆ ವಿಡಿಯೊದಲ್ಲಿ ಸೆರೆಯಾಗಿದೆ.
“ಏಮ್ಸ್ ನಂತಹ ಉನ್ನತ ದರ್ಜೆಯ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಅಧಿಕಾರಿಯೊಬ್ಬ ಮಹಿಳಾ ವೈದ್ಯರೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದ. ಇದರಿಂದ ಕುಪಿತಗೊಂಡ ಆಸ್ಪತ್ರೆಯ ವೈದ್ಯರು ಆಸ್ಪತ್ರೆಯ ಹೊರಗೆ ಮುಷ್ಕರ ಹೂಡಿ, ಪ್ರತಿಭಟನೆ ನಡೆಸುತ್ತಿದ್ದರು. ದೊಡ್ಡ ಸಂಖ್ಯೆಯ ವೈದ್ಯರು ಆಸ್ಪತ್ರೆಯ ಹೊರಗೆ ಪ್ರತಿಭಟಿಸುತ್ತಿರುವುದನ್ನು ಕಂಡ ಪೊಲೀಸರು, ಆರೋಪಿಯನ್ನು ಬಂಧಿಸಲು ಆಸ್ಪತ್ರೆಯೊಳಕ್ಕೇ ಕಾರನ್ನು ಚಲಾಯಿಸಲು ನಿರ್ಧರಿಸಿದರು” ಎಂದು ರಿಷಿಕೇಶ್ ಪೊಲೀಸ್ ಅಧಿಕಾರಿ ಶಂಕರ್ ಸಿಂಗ್ ಬಿಷ್ಟ್ PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
We have become a circus.
— Ravi Handa (@ravihanda) May 23, 2024
Police jeep in a hospital ward.
The video is rumoured to be from AIIMS Rishikesh. pic.twitter.com/b42Ue5qzjo
ಆರೋಪಿಯನ್ನು ಸತೀಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಮಹಿಳಾ ವೈದ್ಯರೊಬ್ಬರಿಗೆ ಅಶ್ಲೀಲ ಸಂದೇಶ ರವಾನಿಸಿದ ಆರೋಪದಲ್ಲಿ ಆತನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಆದರೆ, ಆರೋಪಿ ಸತೀಶ್ ಕುಮಾರ್ ನನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಪ್ರತಿಭಟನಾನಿರತ ವೈದ್ಯರು ಆಗ್ರಹಿಸುತ್ತಿದ್ದಾರೆ.