ಮಹಾರಾಷ್ಟ್ರ ವಿಧಾನಸಭಾ ಚುನಾವಣೆ | ಫೋನ್ ಕದ್ದಲಿಕೆ ಆರೋಪ ಬೆನ್ನಲ್ಲೇ ಡಿಜಿಪಿ ರಶ್ಮಿ ಶುಕ್ಲಾ ವರ್ಗಾವಣೆ
ಮುಂಬೈ: ಪ್ರತಿಪಕ್ಷಗಳಿಂದ ಫೋನ್ ಕದ್ದಾಲಿಕೆ ಆರೋಪದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಡಿಜಿಪಿ ರಶ್ಮಿ ಶುಕ್ಲಾ ಅವರನ್ನು ವರ್ಗಾವಣೆ ಮಾಡಿ ಚುನಾವಣಾ ಆಯೋಗ ಸೋಮವಾರ ಆದೇಶಿಸಿದೆ.
ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟ ಪರ ಉನ್ನತ ಪೊಲೀಸ್ ಅಧಿಕಾರಿ ರಶ್ಮಿ ಶುಕ್ಲಾ ಒಲವು ಹೊಂದಿದ್ದಾರೆ. ಅವರು ಉನ್ನತ ಹುದ್ದೆಯಲ್ಲಿ ಮುಂದುವರಿದರೆ ನ್ಯಾಯಯುತ ಚುನಾವಣೆ ಅಸಾಧ್ಯ ಎಂದು ಎಂದು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಆರೋಪಿಸಿವೆ.
ರಾಜ್ಯ ಪೊಲೀಸ್ ಮುಖ್ಯಸ್ಥರ ಹುದ್ದೆಯಿಂದ ರಶ್ಮಿ ಶುಕ್ಲಾ ಅವರ ಜವಾಬ್ದಾರಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿರಿಯ ಐಪಿಎಸ್ ಅಧಿಕಾರಿಗೆ ಹಸ್ತಾಂತರಿಸುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ಸುಜಾತಾ ಸೌನಿಕ್ ಅವರಿಗೆ ಚುನಾವಣಾ ಆಯೋಗವು ಸೂಚಿಸಿದೆ. ಮುಂದಿನ ಮುಖ್ಯಸ್ಥರ ಆಯ್ಕೆಗಾಗಿ ನವೆಂಬರ್ 5 ರೊಳಗೆ ಮೂವರನ್ನು ಒಳಗೊಂಡ ಸಮಿತಿಯನ್ನು ರಚಿಸುವಂತೆಯೂ ಚುನಾವಣಾ ಆಯೋಗ ಹೇಳಿದೆ ಎಂದು ವರದಿಗಳು ತಿಳಿಸಿವೆ.
ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಈ ಹಿಂದೆ ರಾಜ್ಯ ವಿಧಾನಸಭೆ ಚುನಾವಣೆಯ ಪರಿಶೀಲನಾ ಸಭೆ ಮತ್ತು ಘೋಷಣೆಯ ಸಂದರ್ಭದಲ್ಲಿ ಅಧಿಕಾರಿಗಳಿಗೆ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವಂತೆ ಹೇಳಿದ್ದರು.
ಮಹಾರಾಷ್ಟ್ರದಲ್ಲಿ ನವೆಂಬರ್ 20 ರಂದು 288 ವಿಧಾನಸಭಾ ಸ್ಥಾನಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 23 ರಂದು ಫಲಿತಾಂಶ ಪ್ರಕಟವಾಗಲಿದೆ.