ಮಾಧವಿ ಬುಚ್ ವಿರುದ್ಧ ತಿರುಗಿಬಿದ್ದ ಸೆಬಿ ಉನ್ನತಾಧಿಕಾರಿಗಳು
ಹೊಸದಿಲ್ಲಿ: ಸೆಬಿ ಮುಖ್ಯಸ್ಥೆ ಮಾಧವಿ ಬುಚ್ ವಿರುದ್ಧ ಸಂಸ್ಥೆಯ ಉನ್ನತಾಧಿಕಾರಿಗಳು ತಮ್ಮ ಸಂಸ್ಥೆಯ ಮುಖ್ಯಸ್ಥೆ ವಿರುದ್ಧ ಆರೋಪ ಮಾಡಿದ್ದು ಮಾತ್ರವಲ್ಲದೇ ಅವರ ವಿರುದ್ಧ ಪ್ರತಿಭಟನೆಗೂ ಇಳಿದಿರುವುದು ಇಡೀ ಪ್ರಕರಣಕ್ಕೆ ವಿಚಿತ್ರ ತಿರುವು ನೀಡಿದೆ.
ಸಂಸ್ಥೆಯ ಕೆಲಸದ ಸಂಸ್ಕೃತಿಯನ್ನು ವಿಷಪೂರಿತಗೊಳಿಸಿರುವ ಮಾಧವಿ ಬುಚ್ ರಾಜೀನಾಮೆ ನೀಡಬೇಕು ಎನ್ನುವುದು, ವಾರ್ಷಿಕ 34 ಲಕ್ಷ ರೂಪಾಯಿ ಆರಂಭಿಕ ವೇತನ ಪಡೆಯುತ್ತಿರುವ ಗ್ರೇಡ್ ಎ ಪ್ರವೇಶ ಮಟ್ಟದ ಉನ್ನತಾಧಿಕಾರಿಗಳ ಒಕ್ಕೊರಲ ಆಗ್ರಹ. ಕಳೆದ ಎರಡು ಮೂರು ವರ್ಷಗಳಿಂದ ಒಳಗೊಳಗೇ ಕುದಿಯುತ್ತಿರುವ ಈ ಆಕ್ರೋಶ ಹಾಗೂ ಹತಾಶೆ ಇದೀಗ ಕಟ್ಟೆಯೊಡೆದಿದೆ ಎಂದು ಸೆಬಿ ಅಧಿಕಾರಿಗಳು ಹೇಳುತ್ತಾರೆ. ಗೌರವಕ್ಕಾಗಿ ಆಗ್ರಹಿಸುವ ಎ ದರ್ಜೆಯ ಸೆಬಿ ಅಧಿಕಾರಿಗಳ ಅಹವಾಲುಗಳು ಎಂಬ ಶೀರ್ಷಿಕೆಯಡಿ ಪತ್ರ ಬರೆದಿರುವ ಅಧಿಕಾರಿಗಳು, ಉದ್ಯೋಗಿಗಳ ಬಗ್ಗೆ ಮುಖ್ಯಸ್ಥರ ದೃಷ್ಟಿಕೋನ ಮತ್ತು ಅವರೊಂದಿಗೆ ವರ್ತಿಸುವ ರೀತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಾರು ಒಂದು ಸಾವಿರ ಮಂದಿ ಇರುವ ಸಹಾಯಕ ವ್ಯವಸ್ಥಾಪಕರು ಹಾಗೂ ಮೇಲ್ದರ್ಜೆಯ ಅಧಿಕಾರಿಗಳ ಪೈಕಿ ಅರ್ಧಕ್ಕೂ ಹೆಚ್ಚು ಮಂದಿ ಈ ಪತ್ರಕ್ಕೆ ಸಹಿ ಮಾಡಿದ್ದಾರೆ. ಆದರೆ ಈ ಆರೋಪವನ್ನು ಸೆಬಿ ತಳ್ಳಿಹಾಕಿದೆ. ಶೇಕಡ 55ರಷ್ಟು ಎಚ್ ಆರ್ ಎ ಬೇಡಿಕೆ ಮುಂದಿಟ್ಟಿರುವ ಉದ್ಯೋಗಿಗಳನ್ನು ಬಾಹ್ಯಶಕ್ತಿಗಳು ಪ್ರಚೋದಿಸುವ ಕುಮ್ಮಕ್ಕು ನಡೆದಿದೆ ಎನ್ನುವದು ಸೆಬಿಯ ಪ್ರತ್ಯಾರೋಪ. ಈ ಹಿಂದೆ ಅವರು ನಡೆಸಿದ ಪ್ರತಿಭಟನೆಗೆ ಯಾವುದೇ ಪ್ರಯೋಜನ ಸಿಗದ ಹಿನ್ನೆಲೆಯಲ್ಲಿ ಕೆಲಸದ ಸಂಸ್ಕೃತಿ ಹದಗೆಟ್ಟಿದೆ ಎಂಬ ಅರೋಪ ಮುಂದಿಟ್ಟಿದ್ದಾರೆ ಎನ್ನುವುದು ಸೆಬಿ ವಾದ.