ನಿತೀಶ್ ಕುಮಾರ್ ರಾಜೀನಾಮೆ ನೀಡುವ ಕುರಿತು ನಮಗೆ ಮಾಹಿತಿಯಿಲ್ಲ: ಮಲ್ಲಿಕಾರ್ಜುನ ಖರ್ಗೆ
ಹೊಸದಿಲ್ಲಿ: ಬಿಹಾರ ಮುಖ್ಯಮಂತ್ರಿ ಹಾಗೂ ಜೆಡಿ(ಯು) ಮುಖ್ಯಸ್ಥ ನಿತೀಶ್ ಕುಮಾರ್ ಅವರು ಇಂಡಿಯಾ ಮೈತ್ರಿಕೂಟ ತೊರೆದು ಬಿಜೆಪಿ ಜೊತೆ ಮತ್ತೆ ಕೈಜೋಡಿಸಲಿದ್ದಾರೆಂಬ ಊಹಾಪೋಹಗಳ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮೈತ್ರಿಕೂಟವನ್ನು ಜೆಡಿ(ಯು) ತೊರೆಯುವ ಕುರಿತಂತೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.
“ಅವರಿಗೆ ಪತ್ರ ಬರೆದಿದ್ದೇನೆ. ಮಾತನಾಡಲು ಪ್ರಯತ್ನಿಸಿದ್ದೇನೆ. ಆದರೆ ನಿತೀಶ್ ಕುಮಾರ್ ಅವರ ಮನಸ್ಸಿನಲ್ಲೇನಿದೆ ಗೊತ್ತಿಲ್ಲ,” ಎಂದು ಸುದ್ದಿಗಾರರ ಜೊತೆ ಮಾತನಾಡಿದ ಖರ್ಗೆ ಹೇಳಿದರು.
“ನಾಳೆ ನಾನು ದಿಲ್ಲಿಗೆ ತೆರಳಿ ಸಂಪೂರ್ಣ ಮಾಹಿತಿ ಪಡೆಯುತ್ತೇನೆ. ಏನು ನಡೆಯುವುದು ನೋಡೋಣ. ನಿತೀಶ್ ರಾಜೀನಾಮೆ ನೀಡುವ ಕುರಿತು ನಮಗೆ ಮಾಹಿತಿಯಿಲ್ಲ. ರಾಜ್ಯಪಾಲರನ್ನು ಭೇಟಿಯಾಗುವ ಕುರಿತೂ ನಮಗೆ ತಿಳಿಸಿಲ್ಲ,” ಎಂದು ಖರ್ಗೆ ಹೇಳಿದರು.
“ಎಲ್ಲರನ್ನೂ ಜೊತೆಯಾಗಿರಿಸಲು ನಮ್ಮ ಕೈಲಾದಷ್ಟು ಶ್ರಮಿಸುತ್ತಿದ್ದೇವೆ. ಒಟ್ಟಾಗಿರಲು ನಾನು ಮಮತಾ ಬ್ಯಾನರ್ಜಿ, ನಿತೀಶ್ ಮತ್ತು ಸೀತಾರಾಂ ಯೆಚೂರಿ ಜೊತೆ ಮಾತನಾಡಿದ್ದೇನೆ. ನಾವು ಒಟ್ಟಿಗಿದ್ದರೆ ಮಾತ್ರ ಒಳ್ಳೆಯ ಹೋರಾಟ ನೀಡಬಹುದೆಂದು ಹೇಳಿದ್ದೇನೆ,” ಎಂದು ಅವರು ಹೇಳಿದರು.
“ಇಂಡಿಯಾ ಮೈತ್ರಿಕೂಟ ಚೆನ್ನಾಗಿ ಕಾರ್ಯನಿರ್ವಹಿಸಲಿದೆ, ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಿದೆ. ಇದನ್ನು ಬಯಸುವವರು ಅವಸರದ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ನನಗನಿಸುತ್ತದೆ,” ಎಂದು ಖರ್ಗೆ ಹೇಳಿದರು.