‘ಆರೆಸ್ಸೆಸ್ ರಾಷ್ಟ್ರದ ಆತ್ಮಕ್ಕೆ ತಗಲಿದ ಕ್ಯಾನ್ಸರ್’ ಹೇಳಿಕೆಗೆ ಕ್ಷಮೆ ಕೋರುವುದಿಲ್ಲ: ತುಷಾರ್ ಗಾಂಧಿ
ತುಷಾರ್ ಗಾಂಧಿ | Photo Credit: THULASI KAKKAT - thehindu.com
ಕೊಚ್ಚಿ : ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್)ವು ರಾಷ್ಟ್ರದ ಆತ್ಮಕ್ಕೆ ತಗಲಿದ ಕ್ಯಾನ್ಸರ್ ಆಗಿದೆ ಎಂದು ಹೇಳಿರುವುದಕ್ಕಾಗಿ ತಾನು ಕ್ಷಮೆ ಕೋರುವುದಿಲ್ಲ ಎಂದು ಮಹಾತ್ಮಾ ಗಾಂಧಿಯವರ ಮರಿಮೊಮ್ಮಗ ತುಷಾರ್ ಗಾಂಧಿ ಶುಕ್ರವಾರ ಹೇಳಿದ್ದಾರೆ.
“ನಾನು ಏನು ಹೇಳಿರುವೆನೋ ಅದಕ್ಕಾಗಿ ಕ್ಷಮೆ ಕೋರಬೇಕು ಎಂಬುದಾಗಿ ಅವರು ಬಯಸಿದ್ದಾರೆ. ನನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕೆಂದು ಅವರು ಬಯಸಿದ್ದಾರೆ. ನಾನು ಹಾಗೆ ಮಾಡುವುದಿಲ್ಲ. ಒಮ್ಮೆ ನಾನು ಏನನ್ನೇ ಆದರೂ ಹೇಳಿದ ಬಳಿಕ, ಅದನ್ನು ಹಿಂದಕ್ಕೆ ಪಡೆಯುವಲ್ಲಿ ನನಗೆ ನಂಬಿಕೆಯಿಲ್ಲ. ನನ್ನ ಹೇಳಿಕೆಗಾಗಿ ಕ್ಷಮೆ ಕೋರುವುದೂ ಇಲ್ಲ” ಎಂದು ಎರ್ನಾಕುಳಮ್‌ನ ಅಳುವದಲ್ಲಿರುವ ಯೂನಿಯನ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತುಷಾರ್ ಗಾಂಧಿ ಹೇಳಿದರು.
ಮಹಾತ್ಮಾ ಗಾಂಧಿ 1925 ಮಾರ್ಚ್ 18ರಂದು ವೈಕಮ್ ಸತ್ಯಾಗ್ರಹದಲ್ಲಿ ಭಾಗವಹಿಸಿದ ಬಳಿಕ, ಯೂನಿಯನ್ ಕ್ರಿಶ್ಚಿಯನ್ ಕಾಲೇಜಿಗೆ ಭೇಟಿ ನೀಡಿದ್ದರು. ಅವರ ಭೇಟಿಯ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕಾಗಿ ತುಷಾರ್ ಗಾಂಧಿ ಕಾಲೇಜಿಗೆ ಭೇಟಿ ನೀಡಿದ್ದಾರೆ.
ಶಿವಗಿರಿ ಮಠದಲ್ಲಿ ನಡೆದ ಶ್ರೀ ನಾರಾಯಣ ಗುರು ಮತ್ತು ಮಹಾತ್ಮಾ ಗಾಂಧಿಯವರ ಐತಿಹಾಸಿಕ ಭೇಟಿಯ ಶತಮಾನೋತ್ಸವ ಸಮಾರಂಭದಲ್ಲಿ ತುಷಾರ್ ಗಾಂಧಿ ಆರ್‌ಎಸ್‌ಎಸ್‌ನ್ನು ಟೀಕಿಸಿದ್ದರು. ಬಿಜೆಪಿ ಮತ್ತು ಆರೆಸ್ಸೆಸ್ ಕೇರಳ ಪ್ರವೇಶಿಸಿರುವ ‘‘ಅಪಾಯಕಾರಿ ಮತ್ತು ದುಷ್ಟ ಶತ್ರುಗಳು’’ ಎಂಬುದಾಗಿ ಅವರು ಬಣ್ಣಿಸಿದ್ದರು. ಆರೆಸ್ಸೆಸ್ ‘‘ವಿಷ’’ ಎಂಬುದಾಗಿಯೂ ಅವರು ಹೇಳಿದ್ದರು.
ಅವರ ಹೇಳಿಕೆಯನ್ನು ಖಂಡಿಸಿ ಆರೆಸ್ಸೆಸ್-ಬಿಜೆಪಿ ಕಾರ್ಯಕರ್ತರು ಬುಧವಾರ ಸಂಜೆ ತಿರುವನಂತಪುರಮ್ ಹೊರವಲಯದ ನೆಯ್ಯತ್ತಿಂಕರ ಎಂಬಲ್ಲಿ ತುಷಾರ್ ಗಾಂಧಿಯ ಕಾರನ್ನು ತಡೆದು ಪ್ರತಿಭಟನೆ ನಡೆಸಿದ್ದರು.
ಈ ಘಟನೆಯು ದೇಶದ್ರೋಹಿಗಳನ್ನು ಬಯಲಿಗೆಳೆಯುವುದನ್ನು ಮುಂದುವರಿಸುವ ನನ್ನ ನಿರ್ಧಾರವನ್ನು ಮತ್ತಷ್ಟು ಬಲಗೊಳಿಸಿದೆ ಎಂದು ಹೇಳಿದ ತುಷಾರ್ ಗಾಂಧಿ,ಇಂಥ ಘಟನೆಯು ಕೇರಳದಲ್ಲಿ ನಡೆದಿರುವುದು ಆಘಾತಕಾರಿಯಾಗಿದೆ ಎಂದು ಹೇಳಿದರು. ‘‘ಕೇರಳದಲ್ಲಿ ಜನರ ಹಕ್ಕುಗಳನ್ನು ಈಗಲೂ ರಕ್ಷಿಸಲಾಗುತ್ತಿದೆ ಮತ್ತು ಭಿನ್ನಾಭಿಪ್ರಾಯವನ್ನು ಗೌರವಿಸುವುದು ಮಲಯಾಳಿಗರ ಸಂಸ್ಕೃತಿಯ ಭಾಗವಾಗಿದೆ’’ ಎಂದು ಅವರು ನುಡಿದರು.
‘‘ನಾವು ಭಿನ್ನಾಭಿಪ್ರಾಯಗಳ ಜೊತೆಯೇ ವಾಸಿಸುತ್ತಿದ್ದೇವೆ. ನಾವು ಇನ್ನೊಬ್ಬರ ಬಾಯಿ ಮುಚ್ಚಿಸಲು ಹೋಗುವುದಿಲ್ಲ. ನಾವು ಕೇರಳದ ಆತ್ಮ ಮತ್ತು ಮಲಯಾಳಿಗರ ಆಶಯವನ್ನು ರಕ್ಷಿಸಬೇಕಾಗಿದೆ. ವಿಷ ಹೊಂದಿರುವ ಇಂಥ ಜನರನ್ನು ಕೇರಳದಿಂದ ಹೊರದಬ್ಬುವುದು ಅಗತ್ಯವಾಗಿದೆ’’ ಎಂದರು.
ಇದು ಸ್ವಾತಂತ್ರ್ಯ ಹೋರಾಟಕ್ಕಿಂತಲೂ ಮುಖ್ಯವಾದ ಹೋರಾಟವಾಗಿದೆ. ‘‘ಈಗ ನಮ್ಮೆಲ್ಲರ ಎದುರು ಸಮಾನ ಶತ್ರುವೊಬ್ಬ ಇದ್ದಾನೆ’’ ಎಂದು ಅವರು ಅಭಿಪ್ರಾಯಪಟ್ಟರು.
ಮಹಾತ್ಮಾ ಗಾಂಧಿ ಕಾಲೇಜಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನೆಡಲಾಗಿರುವ ಮಾವಿನ ಮರದ ಕೆಳಗೆ ಶತಮಾನದ ಸ್ಮರಣೆ ಕಾರ್ಯಕ್ರಮ ನಡೆಯಿತು. ಕೇರಳದ ಪ್ರತಿಪಕ್ಷ ನಾಯಕ ವಿ.ಡಿ. ಸತೀಶನ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ತುಷಾರ್ ಗಾಂಧಿಯನ್ನು ಬಂಧಿಸಬೇಕೆಂದು ಕೇರಳದ ಬಿಜೆಪಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ವಿ. ಮುರಳೀಧರನ್ ಒತ್ತಾಯಿಸಿದ್ದಾರೆ.