ಒಡಿಶಾ | ಅತ್ಯಾಚಾರದ ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದ್ದ ವ್ಯಕ್ತಿಯ ಆತ್ಮಹತ್ಯೆ: ಇಬ್ಬರು ಪತ್ರಕರ್ತರ ಬಂಧನ

ಸಾಂದರ್ಭಿಕ ಚಿತ್ರ | PC : PTI
ಕೇಂದ್ರಪಾರ: ಸುಳ್ಳು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸಲಾಗಿದ್ದ ಒಡಿಶಾದ ಕೇಂದ್ರಪಾರ ಜಿಲ್ಲೆಯ 50 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ರವಿವಾರ ಇಬ್ಬರು ಪತ್ರಕರ್ತರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಇಬ್ಬರು ಆರೋಪಿಗಳೊಂದಿಗೆ ಸೇರಿಕೊಂಡು ಮೃತ ವ್ಯಕ್ತಿಯ ವಿರುದ್ಧ ಅತ್ಯಾಚಾರ ಆರೋಪದ ಪಿತೂರಿ ನಡೆಸುವಲ್ಲಿ ಭಾಗಿಯಾಗಿದ್ದ ಮಹಿಳೆಯೊಬ್ಬರು ಪರಾರಿಯಾಗಿದ್ದಾರೆ.
ಮಹಿಳೆಯೊಬ್ಬರ ಮೇಲೆ ಅತ್ಯಾಚಾರವೆಸಗಿದ ಆರೋಪಕ್ಕೆ ಗುರಿಯಾಗಿದ್ದ ಪಟ್ಕುರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರ ನಿವಾಸಿಯಾದ 50 ವರ್ಷದ ವ್ಯಕ್ತಿಯೊಬ್ಬರು ಗುರುವಾರ ಮರಕ್ಕೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದರು ಎಂದು ಅವರು ಹೇಳಿದ್ದಾರೆ.
ಈ ವೇಳೆ ಘಟನಾ ಸ್ಥಳದಿಂದ ಪೊಲೀಸರು ಪತ್ತೆ ಹಚ್ಚಿದ್ದ ಡೆತ್ ನೋಟ್ ನಲ್ಲಿ, ನನ್ನ ಸಾವಿಗೆ ಇಬ್ಬರು ಪತ್ರಕರ್ತರು ಹಾಗೂ 31 ವರ್ಷದ ಓರ್ವ ಮಹಿಳೆ ಕಾರಣ ಎಂದು ಮೃತ ವ್ಯಕ್ತಿಯು ಆರೋಪಿಸಿರುವುದು ಕಂಡು ಬಂದಿತ್ತು. ಈ ಇಬ್ಬರು ಆರೋಪಿಗಳಿಂದ ಪುಸಲಾವಣೆಗೊಳಗಾಗಿದ್ದ ಮಹಿಳೆಯು, ಮೃತ ವ್ಯಕ್ತಿಯ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದರು.
ಇದಾದ ನಂತರ, ಮೃತ ವ್ಯಕ್ತಿಯ ಪತ್ನಿಯು ತನ್ನ ಪತಿಯ ಸಾವಿಗೆ ಈ ಮೂವರೇ ಕಾರಣ ಎಂದು ದೂರು ದಾಖಲಿಸಿದ ಬೆನ್ನಿಗೇ, ಪೊಲೀಸರು ಕಾರ್ಯಪ್ರವೃತ್ತರಾಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ, ಖಾಸಗಿ ಸುದ್ದಿ ವಾಹಿನಿ ಓರ್ವ ಪತ್ರಕರ್ತ ಹಾಗೂ ಯೂಟ್ಯೂಬ್ ವಾಹಿನಿಯ ಓರ್ವ ಪತ್ರಕರ್ತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.
ಈ ಪ್ರಕರಣದ ಮೂರನೆ ಆರೋಪಿಯಾದ ಮಹಿಳೆಯ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.