ಪ್ರಧಾನಿ ಮೋದಿ ಚಿತ್ರ ಇರುವ ʼಸೆಲ್ಫಿ ಪಾಯಿಂಟ್ʼ ಸ್ಥಾಪನೆಗೆ ವಿವಿ, ಕಾಲೇಜುಗಳಿಗೆ ಯುಜಿಸಿ ಸೂಚನೆ
ಹೊಸದಿಲ್ಲಿ: ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)ವು ಪ್ರಧಾನಿ ನರೇಂದ್ರ ಮೋದಿಯವರ ಚಿತ್ರಗಳ ಹಿನ್ನೆಲೆಯಲ್ಲಿ ಸೆಲ್ಫಿ ಪಾಯಿಂಟ್‌ಗಳನ್ನು ಅಥವಾ ತಾಣಗಳನ್ನು ಸ್ಥಾಪಿಸುವಂತೆ ದೇಶದಲ್ಲಿಯ ಎಲ್ಲ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಗೆ ಸೂಚನೆ ನೀಡಿದೆ. ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳಿಗೆ ಮುನ್ನ ಈ ನಿರ್ದೇಶನ ಹೊರಬಿದ್ದಿದೆ ಎಂದು telegraphindia.com ವರದಿ ಮಾಡಿದೆ.
ಯುಜಿಸಿಯು ಈ ತಾಣಗಳಲ್ಲಿ ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಳ್ಳಲು ಮತ್ತು ಅವುಗಳನ್ನು ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲು ವಿದ್ಯಾರ್ಥಿಗಳು ಮತ್ತು ಸಂದರ್ಶಕರನ್ನು ಉತ್ತೇಜಿಸುವಂತೆ ಕ್ಯಾಂಪಸ್ ಅಧಿಕಾರಿಗಳನ್ನು ಹುರಿದುಂಬಿಸುವ ಮೂಲಕ ವಾಸ್ತವದಲ್ಲಿ ಅವರನ್ನು ಬಿಜೆಪಿಯ ಅನಧಿಕೃತ ಪ್ರಚಾರಕರನ್ನಾಗಿ ಮಾಡುತ್ತಿದೆ.
ಯುಜಿಸಿಯು ಬಣ್ಣಿಸಿರುವ ‘ವಿವಿಧ ಕ್ಷೇತ್ರಗಳಲ್ಲಿ ಭಾರತದ ಸಾಧನೆ’ಗಳತ್ತ ಗಮನ ಸೆಳೆಯುವುದು ಮತ್ತು ತನ್ಮೂಲಕ ಸಾಮೂಹಿಕ ಹೆಮ್ಮೆಯ ಪ್ರಜ್ಞೆಯನ್ನು ಬೆಳೆಸುವುದು ಇದರ ಉದ್ದೇಶವಾಗಿದೆ.
ಯುಜಿಸಿಯು ಶಿಕ್ಷಣ ಸಂಸ್ಥೆಗಳು ತಮಗೆ ಸಂಬಂಧವೇ ಇಲ್ಲದ ‘ವ್ಯಕ್ತಿನಿಷ್ಠೆ ನಿರ್ಮಾಣ’ ಪ್ರಕ್ರಿಯೆಯಲ್ಲಿ ತೊಡಗುವಂತೆ ಮಾಡುತ್ತಿದೆ ಎಂದು ಅನೇಕ ಶಿಕ್ಷಣ ತಜ್ಞರು ಆರೋಪಿಸಿದ್ದಾರೆ.
ಯುಜಿಸಿ ಕಾರ್ಯದರ್ಶಿ ಮನೀಷ್ ಜೋಶಿ ಅವರು ಶುಕ್ರವಾರ ಎಲ್ಲ ಭಾರತೀಯ ವಿವಿಗಳ ಕುಲಪತಿಗಳು ಮತ್ತು ಎಲ್ಲ ಕಾಲೇಜುಗಳ ಪ್ರಾಂಶುಪಾಲರಿಗೆ ಕಳುಹಿಸಿರುವ ಪತ್ರದಲ್ಲಿ, ‘ವಿವಿಧ ಕ್ಷೇತ್ರಗಳಲ್ಲಿ ಭಾರತದ ಪ್ರಗತಿಯ ಸ್ಫೂರ್ತಿಯೊಂದಿಗೆ ಯುವಜನರ ಶಕ್ತಿ ಮತ್ತು ಉತ್ಸಾಹವನ್ನು ಬಳಸಿಕೊಳ್ಳಲು ಇದು ಅನನ್ಯ ಅವಕಾಶವಾಗಿದೆ’ ಎಂದು ಹೇಳಿದ್ದಾರೆ.
ನಿಮ್ಮ ಸಂಸ್ಥೆಯೊಳಗೆ ಸೆಲ್ಫಿ ಪಾಯಿಂಟ್ ಸ್ಥಾಪಿಸುವ ಮೂಲಕ ನಮ್ಮ ದೇಶವು ಮಾಡಿರುವ ಅದ್ಭುತ ಪ್ರಗತಿಗಳನ್ನು ಸಂಭ್ರಮಿಸೋಣ ಮತ್ತು ಅವುಗಳನ್ನು ಪ್ರಸಾರ ಮಾಡೋಣ. ವಿವಿಧ ಕ್ಷೇತ್ರಗಳಲ್ಲಿ ಭಾರತದ ಸಾಧನೆಯ, ವಿಶೇಷವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ರಡಿ ನೂತನ ಉಪಕ್ರಮಗಳ ಬಗ್ಗೆ ಯುವಜನರಲ್ಲಿ ಅರಿವು ಮೂಡಿಸುವುದು ಸೆಲ್ಫಿ ಪಾಯಿಂಟ್‌ನ ಉದ್ದೇಶವಾಗಿದೆ ಎಂದೂ ಪತ್ರದಲ್ಲಿ ಹೇಳಲಾಗಿದೆ.
ಯುಜಿಸಿಯು ಸೆಲ್ಫಿ ಪಾಯಿಂಟ್‌ಗಳಿಗಾಗಿ ಹಲವಾರು ವಿನ್ಯಾಸಗಳನ್ನು ಸೂಚಿಸಿದೆ. ಪ್ರತಿ ವಿನ್ಯಾಸವನ್ನೂ ಶಿಕ್ಷಣದ ಅಂತರರಾಷ್ಟ್ರೀಕರಣ,ವೈವಿಧ್ಯತೆಯಲ್ಲಿ ಏಕತೆ,ಸ್ಮಾರ್ಟ್ ಇಂಡಿಯಾ ಹ್ಯಾಕ್‌ಥಾನ್,ಭಾರತೀಯ ಜ್ಞಾನ ವ್ಯವಸ್ಥೆ,ಬಹುಭಾಷೀಯತೆ ಮತ್ತು ಉನ್ನತ ಶಿಕ್ಷಣ,ಸಂಶೋಧನೆ ಹಾಗೂ ನವೀನತೆಗಳಲ್ಲಿ ಭಾರತದ ಪ್ರಗತಿಯಂತಹ ನಿರ್ದಿಷ್ಟ ವಿಷಯಕ್ಕೆ ಅನುಗುಣವಾಗಿ ರೂಪಿಸಲಾಗಿದೆ.
ಪ್ರತಿಯೊಂದು ಸೆಲ್ಫಿ ಪಾಯಿಂಟ್‌ನ್ನು ಕ್ಯಾಂಪಸ್‌ನಲ್ಲಿಯ ಅಯಕಟ್ಟಿನ ಸ್ಥಳದಲ್ಲಿ ಸ್ಥಾಪಿಸಬೇಕು ಮತ್ತು ೩ಡಿ ವಿನ್ಯಾಸವನ್ನು ಹೊಂದಿರಬೇಕು.
ಸರಕಾರವು ಪ್ರತಿಯೊಂದೂ ಸಾಮಾನ್ಯ ಸಾಧನೆಯನ್ನು ಅದ್ಭುತವೆಂದು ಬಿಂಬಿಸುತ್ತಿದೆ ಮತ್ತು ಅದರ ಹೆಗ್ಗಳಿಕೆಯನ್ನು ಪ್ರಧಾನಿಯವರಿಗೆ ಸಲ್ಲಿಸುತ್ತಿದೆ ಎಂದು ಹೇಳಿದ ಪ್ರಮುಖ ಶಿಕ್ಷಣ ಸಂಸ್ಥೆಯೊಂದರ ಅಧ್ಯಾಪಕರೋರ್ವರು, ಈಗ ನಡೆಯುತ್ತಿರುವುದು ಆರಾಧನಾ ವ್ಯಕ್ತಿತ್ವವನ್ನು ನಿರ್ಮಿಸುವ ಪೂರ್ಣ ಪ್ರಮಾಣದ ಪ್ರಚಾರವಾಗಿದೆ. ಇದಕ್ಕಾಗಿ ಸರಕಾರವು ಈ ಚಟುವಟಿಕೆಗಳಿಗೆ ಸಂಬಂಧವೇ ಇಲ್ಲದ ಸಾರ್ವಜನಿಕ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ. ಸರಕಾರ ಅಥವಾ ಯುಜಿಸಿ ಇಂತಹ ಪ್ರಚಾರವನ್ನು ಉತ್ತೇಜಿಸುವಂತೆ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಲು ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ ಎಂದರು.
ಕೋವಿಡ್ ಲಸಿಕೆ ಪ್ರಮಾಣಪತ್ರಗಳು ಸೇರಿದಂತೆ ಹಲವಾರು ಮಾರ್ಗಗಳ ಮೂಲಕ ಪ್ರಧಾನಿ ಮೋದಿಯವರ ಚಿತ್ರಗಳನ್ನು ಪ್ರಸಾರ ಮಾಡಲಾಗಿದೆ. ರೋಜಗಾರ್ ಮೇಲಾಗಳಲ್ಲಿ ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸಲಾಗಿದ್ದು, ಅಲ್ಲಿ ಹೊಸದಾಗಿ ನೇಮಕಗೊಂಡಿರುವ ಸರಕಾರಿ ಉದ್ಯೋಗಿಗಳು ಅಥವಾ ಪದೋನ್ನತಿಗೊಂಡಿರುವ ಉದ್ಯೋಗಿಗಳು ಮೋದಿಯವರ ಕಟ್-ಔಟ್‌ಗಳ ಮುಂದೆ ನಿಂತುಕೊಂಡು ಚಿತ್ರವನ್ನು ತೆಗೆಸಿಕೊಳ್ಳಬೇಕಿದೆ ಎಂದು ಹೇಳಿದ ಅವರು, ಈ ಎಲ್ಲ ಚಟುವಟಿಕೆಗಳಿಗೆ ಒಬ್ಬನೇ ನಾಯಕ ಕಾರಣ ಎಂಬ ನವಿರಾದ ಗ್ರಹಿಕೆಯನ್ನು ಸೃಷ್ಟಿಸಲಾಗುತ್ತಿದೆ. ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಅಮಾಯಕ ಮತದಾರರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಇದನ್ನು ಮಾಡಲಾಗುತ್ತಿದೆ ಎಂದರು.
ವೈವಿಧ್ಯಮಯ ವಿಚಾರಗಳನ್ನು ಪ್ರೋತ್ಸಾಹಿಸುವ, ಚರ್ಚೆಗಳನ್ನು ಉತ್ತೇಜಿಸುವ ಮತ್ತು ಸಾರ್ವಜನಿಕ ವಿಷಯಗಳಿಗೆ ಒತ್ತು ನೀಡುವ ಸೆಲ್ಫಿ ಪಾಯಿಂಟ್‌ಗಳಿಗೆ ಸದಾ ಸ್ವಾಗತವಿದೆ ಎಂದು ಹೇಳಿದ ಜವಾಹರಲಾಲ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು)ದ ಪ್ರಾಧ್ಯಾಪಕರೋರ್ವರು,ವಿವಿಯು ಬಹು ವಿಚಾರಗಳನ್ನು ಪೋಷಿಸಲು ಸ್ಥಳವಾಗಿದೆ. ಪ್ರಬಲ ಶಕ್ತಿಗಳಿಂದ ಮುಂದೊತ್ತಲ್ಪಟ್ಟ ಒಂದೇ ಅಭಿಪ್ರಾಯವನ್ನು ಉತ್ತೇಜಿಸುವ ಆಲೋಚನೆಯು ವಿವಿಯ ದೀರ್ಘಾವಧಿಯ ಹಿತಾಸಕ್ತಿಗಳಿಗೆ ಧಕ್ಕೆಯನ್ನುಂಟು ಮಾಡುತ್ತದೆ ಎಂದರು.
ಯುಜಿಸಿಯು ಇಂತಹ ಸುತ್ತೋಲೆಗಳನ್ನು ಹೊರಡಿಸುತ್ತಲೇ ಇರುತ್ತದೆ ಮತ್ತು ಅವುಗಳನ್ನು ನಿರ್ಲಕ್ಷಿಸಲು ಕ್ಯಾಂಪಸ್ ಆಡಳಿತಗಳು ಮುಕ್ತವಾಗಿವೆ ಎಂದು ಹೇಳಿದ ಮ್ಯಾನೇಜ್‌ಮೆಂಟ್ ಶಿಕ್ಷಕರೋರ್ವರು,ಶಿಕ್ಷಣ ಸಂಸ್ಥೆಗಳು ಇಂತಹ ಸಲಹೆಗಳಿಗೆ ಕಿವಿಗೊಡಬಾರದು. ಸಂಸ್ಥೆಗಳ ಮುಖ್ಯಸ್ಥರು ಭಟ್ಟಂಗಿಗಳಲ್ಲದಿದ್ದರೆ ಅವರಿಗೆ ಇಂತಹ ಸಲಹೆಗಳನ್ನು ಕಡೆಗಣಿಸಲು ಸಾಧ್ಯವಾಗುತ್ತದೆ ಎಂದರು.