ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆ ಜ.10ಕ್ಕೆ ಮುಂದೂಡಿಕೆ
ಹೊಸದಿಲ್ಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಜನವರಿ 10ಕ್ಕೆ ಮುಂದೂಡಿದೆ. 2020ರ ಫೆಬ್ರವರಿಯಲ್ಲಿ ಉತ್ತರ ದಿಲ್ಲಿಯಲ್ಲಿ ನಡೆದ ಗಲಭೆಯ ಸಂಚಿನಲ್ಲಿ ಶಾಮೀಲಾಗಿದ್ದರು ಎಂಬ ಆರೋಪದಲ್ಲಿ ಉಮರ್ ಖಾಲಿದ್ ವಿರುದ್ಧ ಭಯೋತ್ಪಾದನೆ ವಿರೋಧಿ ಯುಎಪಿಎ ಕಾನೂನಿನಡಿ ಮೊಕದ್ದಮೆ ದಾಖಲಿಸಲಾಗಿತ್ತು.
ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅಥವಾ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು ವಾದಮಂಡನೆಗೆ ಲಭ್ಯರಿರದಿರುವುದರಿಂದ ನ್ಯಾಯಾಧೀಶರಾದ ಬೇಲಾ ಎಂ.ತ್ರಿವೇದಿ ಹಾಗೂ ಸತೀಶ್ಚಂದ್ರ ಶರ್ಮಾ ಅವರನ್ನೊಳಗೊಂಡ ನ್ಯಾಯಪೀಠವು ವಿಚಾರಣೆಯನ್ನು ಜನವರಿ 10ಕ್ಕೆ ಮುಂದೂಡಿದೆ.
ಹಿರಿಯ ನ್ಯಾಯವಾದಿಗಳು ಲಭ್ಯರಿಲ್ಲದೆ ಇರುವುದರಿಂದ ಅರ್ಜಿದಾರರು ಹಾಗೂ ಭಾರತ ಸರಕಾರವು ಜಂಟಿಯಾಗಿ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಜಾಮೀನು ಅರ್ಜಿಯ ವಿಚಾರಣೆಯನ್ನು ಜನವರಿ 10ಕ್ಕೆ ಪಟ್ಚಿ ಮಾಡಲಾಗಿದೆ ಎಂದು ನ್ಯಾಯಪೀಠ ತಿಳಿಸಿತು.
ಯುಎಪಿಎಯ ವಿವಿಧ ಕಾನೂನುನಿಯಮಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಜೊತೆಗೆ ಖಾಲಿದ್ ಅವರ ಜಾಮೀನು ಅರ್ಜಿಯನ್ನೂ ಕೂಡಾ ಪರಿಶೀಲಿಸಲಾಗುವುದು ಎಂದು ನ್ಯಾಯಪೀಠ ತಿಳಿಸಿತು.