ಉಮರ್ ಖಾಲಿದ್ ಜಾಮೀನು ಅರ್ಜಿಯನ್ನು ಸತತ ಆರನೇ ಬಾರಿ ಮುಂದೂಡಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: 2020ರ ದಿಲ್ಲಿ ಗಲಭೆ ಪ್ರಕರಣದಲ್ಲಿ ಯುಎಪಿಎ ಕಾಯ್ದೆ ಹಾಗೂ ಕ್ರಿಮಿನಲ್ ಪಿತೂರಿ ಆರೋಪದಲ್ಲಿ ಸೆಪ್ಟೆಂಬರ್ 2020ರಿಂದ ಜೈಲುವಾಸ ಅನುಭವಿಸುತ್ತಿರುವ ಹೋರಾಟಗಾರ ಉಮರ್ ಖಾಲಿದ್ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಸತತ ಆರನೆಯ ಬಾರಿ ಮುಂದೂಡಿದೆ ಎಂದು scroll.in ವರದಿ ಮಾಡಿದೆ.
ಫೆಬ್ರವರಿ 23, 2020ರಿಂದ ಫೆಬ್ರವರಿ 26, 2020ರವರೆಗೆ ಸಿಎಎ ಪರ ಹಾಗೂ ಅದನ್ನು ವಿರೋಧಿಗಳ ನಡುವೆ ಆರಂಭವಾದ ಗಲಭೆಯಲ್ಲಿ, 53 ಮಂದಿ ಮೃತಪಟ್ಟು, ನೂರಾರು ಮಂದಿ ಗಾಯಗೊಂಡಿದ್ದರು. ಮೃತಪಟ್ಟವರಲ್ಲಿ ಬಹುತೇಕರು ಮುಸ್ಲಿಮರು.
ಈ ಹಿಂಸಾಚಾರವು ಪ್ರಧಾನಿ ನರೇಂದ್ರ ಸರ್ಕಾರದ ವರ್ಚಸ್ಸಿಗೆ ಕುಂದುಂಟು ಮಾಡುವ ದೊಡ್ಡ ಮಟ್ಟದ ಪಿತೂರಿಯ ಭಾಗವಾಗಿತ್ತು ಎಂದು ದಿಲ್ಲಿ ಪೊಲೀಸರು ಪ್ರತಿಪಾದಿಸಿದ್ದರು.
ಸೆಪ್ಟೆಂಬರ್ 13, 2020ರಂದು ದಿಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಖಾಲಿದ್, ಹಿಂಸಾಚಾರದಲ್ಲಿ ನನ್ನ ಯಾವುದೇ ಪಾತ್ರವಿಲ್ಲ ಹಾಗೂ ಪ್ರಕರಣದ ಆರೋಪಿಗಳೊಂದಿಗೆ ನನಗೆ ಯಾವುದೇ ಸಂಪರ್ಕವಿರಲಿಲ್ಲ ಎಂದು ತಮ್ಮ ಜಾಮೀನು ಮನವಿಯಲ್ಲಿ ವಾದಿಸಿದ್ದರು.
ಅಕ್ಟೋಬರ್ ತಿಂಗಳಲ್ಲಿ ದಿಲ್ಲಿ ಹೈಕೋರ್ಟ್ ತಮಗೆ ಜಾಮೀನು ನಿರಾಕರಿಸಿದ ನಂತರ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿಯಾದ ಉಮರ್ ಖಾಲಿದ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಮಂಗಳವಾರದ ವಿಚಾರಣೆಯ ಸಂದರ್ಭದಲ್ಲಿ, ಸಾಕ್ಷ್ಯಗಳ ದಾಖಲೆಗಳನ್ನು ಪರಿಶೀಲಿಸಬೇಕಿದೆ ಎಂದು ಹೇಳಿದ ನ್ಯಾ. ಬೇಲಾ ಎಂ. ತ್ರಿವೇದಿ ಹಾಗೂ ದಿಪಾಂಕರ್ ದತ್ತಾ ಅವರನ್ನೊಳಗೊಂಡ ನ್ಯಾಯಪೀಠವು, ಪ್ರಕರಣದ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿತು.
“ಆರೋಪಗಳಿಗೆ ಸಂಬಂಧಿಸಿದಂತೆ ಇರುವ ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ” ಎಂದು ಖಾಲಿದ್ ಪರವಾಗಿ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಗೆ ನ್ಯಾಯಪೀಠವು ಸೂಚಿಸಿತು.
ಇದಕ್ಕೂ ಮುನ್ನ, ಈ ಪ್ರಕರಣದಲ್ಲಿ ಯುಎಪಿಎ ಕಾಯ್ದೆಯ ನಿರ್ದಿಷ್ಟ ಕಾನೂನುಗಳಾದ ಭಯೋತ್ಪಾದನೆ, ಭಯೋತ್ಪಾದನೆಗಾಗಿ ನಿಧಿ ಸಂಗ್ರಹಣೆ ಹಾಗೂ ಪಿತೂರಿ ಕಾನೂನುಗಳನ್ನು ಅನ್ವಯಿಸಲಾಗುವುದಿಲ್ಲ ಎಂದು ಕಪಿಲ್ ಸಿಬಲ್ ವಾದಿಸಿದರು.