ಉತ್ತರಪ್ರದೇಶ: ನೋಂದಣಿಯಾಗದ ಮದರಸಗಳಿಗೆ ದಿನಕ್ಕೆ 10 ಸಾವಿರ ರೂ. ದಂಡ!

Update: 2023-10-24 17:06 GMT

ಸಾಂದರ್ಭಿಕ ಚಿತ್ರ | Photo : ndtv 

ಲಕ್ನೊ: ಉತ್ತರಪ್ರದೇಶದ ಮುಝಪ್ಫರ್ನಗರ ಜಿಲ್ಲೆಯಲ್ಲಿ ನೋಂದಣಿಯಾಗದ ಮದರಸಗಳು ಪ್ರತಿ ದಿನ 10 ಸಾವಿರ ರೂ. ದಂಡ ಪಾವತಿಸುವಂತೆ ರಾಜ್ಯ ಶಿಕ್ಷಣ ಇಲಾಖೆ ಸೋಮವಾರ ಹೊರಡಿಸಿದ ನೋಟಿಸಿನಲ್ಲಿ ತಿಳಿಸಿದೆ.

ನೋಂದಣಿಯಾಗದೆ ಕಾರ್ಯಾಚರಿಸುತ್ತಿವೆ ಎಂದು ಹೇಳಲಾದ 12ಕ್ಕೂ ಅಧಿಕ ಮದರಸಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮೂರು ದಿನಗಳ ಒಳಗೆ ದಾಖಲೆಗಳನ್ನು ಸಲ್ಲಿಸಬೇಕು. ಇಲ್ಲದಿದ್ದರೆ ಕ್ರಮಗಳನ್ನು ಎದುರಿಸಬೇಕು ಎಂದು ನೋಟಿಸಿನಲ್ಲಿ ಹೇಳಲಾಗಿದೆ.

ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆಯ ಪ್ರಕಾರ 100ಕ್ಕೂ ಅಧಿಕ ಮದರಸಗಳು ನೋಂದಣಿಯಾಗಿಲ್ಲ ಹಾಗೂ ನಿಮಯಗಳಿಗೆ ವಿರುದ್ಧವಾಗಿ ಕಾರ್ಯಾಚರಿಸುತ್ತಿವೆ ಎಂದು ಮುಝಪ್ಫರ್ನಗರದ ಮೂಲ ಶಿಕ್ಷಣ ಅಧಿಕಾರಿ ಶುಭಂ ಶುಕ್ಲಾ ಅವರು ತಿಳಿಸಿದ್ದಾರೆ.

ಈ ನೋಟಿಸು ಕಾನೂನು ಬಾಹಿರ ಎಂದು ಭಾರತೀಯ ಮುಸ್ಲಿಮರ ಸಂಘಟನೆ ಜಮೀಯತ್ ಉಲೆಮಾ ಎ ಹಿಂದ್ ಪ್ರತಿಪಾದಿಸಿದೆ.

ನಿರ್ಧಿಷ್ಟ ಸಮುದಾಯದವನ್ನು ಮಾತ್ರವೇ ಗುರಿಯಾಗಿರಿಸಲು ಕಾನೂನು ಬಾಹಿರ ನೋಟಿಸುಗಳನ್ನು ಜಾರಿಗೊಳಿಸಿ ಉತ್ತರಪ್ರದೇಶದಲ್ಲಿರುವ ಮದರಸಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಜಮೀಯತ್ ಉಲೇಮಾ ಎ ಹಿಂದ್ ನ ರಾಜ್ಯ ಕಾರ್ಯದರ್ಶಿ ಮೌಲನಾ ಝಾಕೀರ್ ಹುಸೈನ್ ಹೇಳಿದ್ದಾರೆ.

‘‘ಮದರಸಗಳು ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತವೆ. ಅವುಗಳು ದಿನಕ್ಕೆ 10 ಸಾವಿರ ರೂ. ದಂಡ ಪಾವತಿಸಲು ಸಾಧ್ಯವಿಲ್ಲ’’ ಎಂದು ಹುಸೈನ್ ತಿಳಿಸಿದ್ದಾರೆ.

ಉತ್ತರಪ್ರದೇಶದಲ್ಲಿ ಸುಮಾರು ೨೫ ಸಾವಿರ ಮದರಸಗಳಿವೆ. ಇವುಗಳ ಪೈಕಿ 16,500 ಮದರಸಗಳು ಉತ್ತರಪ್ರದೇಶ ಮದರಸ ಶಿಕ್ಷಣ ಮಂಡಳಿಯ ಮಾನ್ಯತೆ ಪಡೆದಿವೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News