ಹನಿಟ್ರ್ಯಾಪ್ : ರಕ್ಷಣಾ ಮಾಹಿತಿ ಸೋರಿಕೆ ಮಾಡಿದ ಶಸ್ತ್ರಾಸ್ತ್ರ ಕಾರ್ಖಾನೆ ಉದ್ಯೋಗಿ ರವೀಂದ್ರ ಕುಮಾರ್ ಬಂಧನ
Photo - NDTV
ಲಕ್ನೋ: ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ (ಐಎಸ್ಐ)ಗಾಗಿ ಬೇಹುಗಾರಿಕೆ ನಡೆಸುತ್ತಿದ್ದ ಶಂಕೆಯಲ್ಲಿ ಫಿರೋಝಾಬಾದ್ನಲ್ಲಿರುವ ಶಸ್ತ್ರಾಸ್ತ್ರ ಕಾರ್ಖಾನೆಯೊಂದರ ಉದ್ಯೋಗಿಯೊಬ್ಬನನ್ನು ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ವು ಶುಕ್ರವಾರ ಬಂಧಿಸಿದೆ. ಐಎಸ್ಐ ಏಜೆಂಟ್ ಒಬ್ಬಳ ಹನಿಟ್ರ್ಯಾಪ್ ಗೆ ಒಳಗಾದ ಆತ ರಕ್ಷಣೆಗೆ ಸಂಬಂಧಿಸಿದ ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡಿದ್ದ ಎನ್ನಲಾಗಿದೆ.
ರವೀಂದ್ರ ಕುಮಾರ್ ಬಂಧಿತ ಆರೋಪಿಯಾಗಿದ್ದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಗಗನಯಾನ ಅಂತರಿಕ್ಷ ಯೋಜನೆ ಹಾಗೂ ಮಿಲಿಟರಿ ಉಪಕರಣಗಳ ಸಾಗಣೆ ಡ್ರೋನ್ ನ ಪ್ರಾಯೋಗಿಕ ಪರೀಕ್ಷೆಯ ಕುರಿತ ಮಾಹಿತಿ ಸೇರಿದಂತೆ ರಹಸ್ಯ ದತ್ತಾಂಶಗಳನ್ನು ಆತ ಹಂಚಿಕೊಂಡಿದ್ದ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ರವೀಂದ್ರ ಕುಮಾರ್ ನ ಸಹಚರನನ್ನು ಕೂಡಾ ಬಂಧಿಸಲಾಗಿದೆ.
ಐಎಸ್ಐಗಾಗಿ ಕೆಲಸ ಮಾಡುತ್ತಿರುವ ನೇಹಾ ಶರ್ಮಾ ಎಂಬ ಸಂಕೇತನಾಮದ ಮಹಿಳಾ ಹ್ಯಾಂಡ್ಲರ್ ಗೆ ದತ್ತಾಂಶಗಳನ್ನು ಸೋರಿಕೆ ಮಾಡುತ್ತಿರುವ ಸಾಧ್ಯತೆಯ ಬಗ್ಗೆ ಉತ್ತರಪ್ರದೇಶದ ಎಟಿಎಸ್ ಹಾಗೂ ಇತರ ಕಾನೂನು ಅನುಷ್ಠಾನ ಏಜೆನ್ಸಿಗಳನ್ನು ಎಚ್ಚರಿಸಲಾಗಿತ್ತು ಎಂದು ಉತ್ತರಪ್ರದೇಶ ಎಟಿಎಸ್ ವರಿಷ್ಠ ನೀಲಬ್ಜಾ ಚೌಧುರಿ ತಿಳಿಸಿದ್ದಾರೆ.
‘‘ ಎಟಿಎಸ್ ನ ಆಗ್ರಾ ಘಟಕವು ರವೀಂದ್ರ ಕುಮಾರ್ ನ ಪ್ರಾಥಮಿಕ ವಿಚಾರಣೆ ನಡೆಸಿತ್ತು. ಇನ್ನಷ್ಟು ವಿಸ್ತೃತವಾಗಿ ಪ್ರಶ್ನಿಸಲು ಆತನನ್ನು ಎಟಿಎಸ್ ನ ಮುಖ್ಯ ಕಾರ್ಯಾಲಯಕ್ಕೆ ಕರೆಸಿಕೊಳ್ಳಲಾಗಿತ್ತು. ‘ನೇಹಾ’ ಎಂಬ ಹ್ಯಾಂಡ್ಲರ್ ಜೊತೆ ಆತ ಅತ್ಯಂತ ಸೂಕ್ಷ್ಮಸಂವೇದಿ ಮಾಹಿತಿಯನ್ನು ಹಂಚಿಕೊಂಡಿರುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ”, ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಹ್ಯಾಂಡ್ಲರ್ ಹೆಸರನ್ನು ರವೀಂದ್ರ ಕುಮಾರ್ ತನ್ನ ಮೊಬೈಪ್ ಫೋನ್ ನಲ್ಲಿ ಚಂದನ್ ಸ್ಟೋರ್ ಕೀಪರ್ 2 ಎಂದು ಹೆಸರಿನಲ್ಲಿ ಸೇವ್ ಮಾಡಿಟ್ಟಿದ್ದ. ನೇಹಾಶರ್ಮಾ ಎಂಬ ಹೆಸರಿನ ಐಎಸ್‌ಐ ಹ್ಯಾಂಡ್ಲರ್ ಫೇಸ್ಬುಕ್ ಮೂಲಕ ರವೀಂದ್ರ ಕುಮಾರ್ ನನ್ನು ಪರಿಚಯ ಮಾಡಿಕೊಂಡಿದ್ದಳು. ನೇಹಾ ಶರ್ಮಾ ಜೊತೆ ಸಂಪರ್ಕಕ್ಕೆ ಬಂದ ಬಳಿಕ, ರವೀಂದ್ರ ಕುಮಾರ್ ವಾಟ್ಸ್ ಆ್ಯಪ್ ಮೂಲಕ ಮಾಹಿತಿಯನ್ನು ಆಕೆಯೊಂದಿಗೆ ಹಂಚಿಕೊಳ್ಳುತ್ತಿದ್ದ ಎನ್ನಲಾಗಿದೆ.
ಐಎಸ್ಐ ದಿ ರಕ್ಷಣೆಗೆ ಸೂಕ್ಷ್ಮಸಂವೇದಿ ಮಾಹಿತಿಗಳನ್ನು ಪಡೆಯಲು ಮಹಿಳಾ ಏಜೆಂಟರನ್ನು ಬಳಸಿಕೊಂಡು ಹನಿಟ್ರ್ಯಾಪ್ ಮಾಡುವುದು ಐಎಸ್‌ಐ ದೀರ್ಘಸಮಯದಿಂದ ಅನುಸರಿಸಿಕೊಂಡು ಬಂದಿರುವ ತಂತ್ರಗಾರಿಕೆಯಾಗಿದೆ ಎಂದು ಚೌಧುರಿ ತಿಳಿಸಿದ್ದಾರೆ.