ನಾನು ಮುಸ್ಲಿಂ ವ್ಯಕ್ತಿ ನಡೆಸುತ್ತಿದ್ದ ಸಸ್ಯಾಹಾರಿ ಹೋಟೆಲ್‌ಗೆ ಹೋಗುತ್ತಿದ್ದೆ : ಸುಪ್ರೀಂಕೋರ್ಟ್ ನ್ಯಾಯಾಧೀಶ
ಹೊಸದಿಲ್ಲಿ: ಉಪಾಹಾರ ಗೃಹಗಳ ಮಾಲಕರು ತಮ್ಮ ಮಳಿಗೆಗಳ ಮುಂದೆ ತಮ್ಮ ಹೆಸರು, ವಿಳಾಸ ಹಾಗೂ ಮೊಬೈಲ್ ಫೋನ್ ಹೊಂದಿರುವ ನಾಮಫಲಕಗಳನ್ನು ಪ್ರದರ್ಶಿಸಬೇಕು ಎಂದು ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ಮಧ್ಯಪ್ರದೇಶ ಸರಕಾರಗಳು ಹೊರಡಿಸಿರುವ ಆದೇಶಗಳು ತೀವ್ರ ವಿವಾದದ ಸ್ವರೂಪವನ್ನು ಪಡೆದುಕೊಂಡಿದ್ದು, ಈ ಆದೇಶಗಳನ್ನು ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಸೇರಿದಂತೆ ಹಲವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾಯಪೀಠದ ನ್ಯಾಯಾಧೀಶರ ಪೈಕಿ ಓರ್ವರಾದ ನ್ಯಾ. ಎಸ್‌ವಿಎನ್ ಭಟ್ಟಿ, ಉಪಾಹಾರ ಗೃಹಗಳಲ್ಲಿನ ಸ್ವಚ್ಛತೆಯ ಪರ ವಕಾಕತ್ತು ವಹಿಸಿ, ನಾನು ಕೇರಳದಲ್ಲಿದ್ದಾಗ ಮುಸ್ಲಿಂ ವ್ಯಕ್ತಿ ನಡೆಸುತ್ತಿದ್ದ ಸಸ್ಯಾಹಾರಿ ಹೋಟೆಲ್‌ಗೆ ಹೋಗುತ್ತಿದ್ದೆ ಎಂಬ ಸಂಗತಿಯನ್ನು ಪ್ರಾಸಂಗಿಕವಾಗಿ ಬಯಲು ಮಾಡಿದರು.
"ನಾನು ಕೇರಳದಲ್ಲಿದ್ದಾಗ ನನಗೆ ನನ್ನದೇ ಆದ ಅನುಭವ ಮತ್ತು ಅರಿವಾಯಿತು. ನಾನು ಈ ನ್ಯಾಯಪೀಠದ ಹಾಲಿ ನ್ಯಾಯಾಧೀಶನಾಗಿರುವುದರಿಂದ ಅದನ್ನು ಬಹುಶಃ ಮುಕ್ತವಾಗಿ ಉಲ್ಲೇಖಿಸಬಾರದು. ಆ ನಗರದ ಹೆಸರನ್ನು ಬಹಿರಂಗಪಡಿಸದೆಯೆ, ಅಲ್ಲಿ ಹಿಂದೂ ಒಬ್ಬರು ನಡೆಸುತ್ತಿದ್ದ ಸಸ್ಯಾಹಾರಿ ಹೋಟೆಲ್ ಹಾಗೂ ಮುಸ್ಲಿಂ ಒಬ್ಬರು ನಡೆಸುತ್ತಿದ್ದ ಸಸ್ಯಾಹಾರಿ ಹೋಟೆಲ್‌ಗಳಿದ್ದವು”.
"ನಾನು ಆ ರಾಜ್ಯದ ಓರ್ವ ನ್ಯಾಯಾಧೀಶನಾಗಿ, ಸಸ್ಯಾಹಾರಕ್ಕಾಗಿ ಮುಸ್ಲಿಂ ವ್ಯಕ್ತಿ ನಡೆಸುತ್ತಿದ್ದ ಹೋಟೆಲ್‌ಗೆ ಹೋಗುತ್ತಿದ್ದೆ. ಆಹಾರ ಸುರಕ್ಷತೆ ಹಾಗೂ ಮಾನದಂಡಕ್ಕೆ ಸಂಬಂಧಪಟ್ಟಂತೆ ಆತ ಎಲ್ಲವನ್ನೂ ಪ್ರದರ್ಶಿಸುತ್ತಿದ್ಧ.ಆತ ದುಬೈನಿಂದ ಮರಳಿ ಬಂದಿದ್ದ ಹಾಗೂ ಆಹಾರ ಸುರಕ್ಷತೆ, ಸ್ವಚ್ಛತೆ ಹಾಗೂ ಶುಚಿತ್ವಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಮಾನದಂಡಗಳನ್ನು ಪಾಲಿಸುತ್ತಿದ್ದ. ಹೀಗಾಗಿ ಆ ಹೋಟೆಲ್ ನನ್ನ ಆಯ್ಕೆಯಾಗಿತ್ತು" ಎಂದು ಹೇಳುವ ಮೂಲಕ, ಕನ್ವರ್ ಮಾರ್ಗದಲ್ಲಿನ ಆಹಾರ ಮಳಿಗೆಗಳು ಆಹಾರ ಸುರಕ್ಷತಾ ಮಾನದಂಡಗಳನ್ನು ಪ್ರದರ್ಶಿಸಬೇಕಾಗಬಹುದು ಎಂಬ ಸೂಚ್ಯ ಸುಳಿವು ನೀಡಿದರು.
ಕನ್ವರ್ ಯಾತ್ರೆಯ ಮಾರ್ಗದ ಉಪಾಹಾರ ಗೃಹಗಳ ಮಾಲಕರು ತಮ್ಮ ಹೆಸರು, ವಿಳಾಸ ಹಾಗೂ ಮೊಬೈಲ್ ಫೋನ್ ಹೊಂದಿರುವ ನಾಮಫಲಕಗಳನ್ನು ತಮ್ಮ ಮಳಿಗೆಗಳ ಮುಂದೆ ಪ್ರದರ್ಶಿಸಬೇಕು ಎಂಬ ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ಮಧ್ಯಪ್ರದೇಶ ಸರಕಾರಗಳ ಆದೇಶವನ್ನು ಪ್ರಶ್ನಿಸಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಲೇಖಕ ಹಾಗೂ ಅಂಕಣಕಾರ ಆಕಾರ್ ಪಟೇಲ್, ಶಿಕ್ಷಣ ತಜ್ಞ ಅಪೂರ್ವಾನಂದ ಝಾ ಹಾಗೂ ನಾಗರಿಕ ಹಕ್ಕುಗಳ ರಕ್ಷಣೆಯ ಸರಕಾರೇತರ ಸಂಸ್ಥೆಗಳ ಒಕ್ಕೂಟವು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಆಧರಿಸಿ, ಸುಪ್ರೀಂಕೋರ್ಟ್ ನಾಮಫಲಕ ಪ್ರದರ್ಶನದ ಆದೇಶಕ್ಕೆ ತಡೆ ನೀಡಿದ್ದು, ವಿಚಾರಣೆ ಪ್ರಗತಿಯಲ್ಲಿದೆ.