ಉತ್ತರ ಪ್ರದೇಶ | ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ : ಸತ್ಸಂಗ ಭವನದ ಸೇವಕನ ಬಂಧನ
ಉತ್ತರಪ್ರದೇಶ : ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಬುಲಂದ್ಶಹರ್ ನ ಗ್ರಾಮವೊಂದರ ಸತ್ಸಂಗ ಭವನದ ಸೇವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯರಿಗೆ ಪ್ರಜ್ಞೆ ತಪ್ಪುವ ಔಷಧ ನೀಡಿ ಆರೋಪಿ ಅತ್ಯಾಚಾರ ಎಸಗುತ್ತಿದ್ದು, ಬಾಲಕಿಯೋರ್ವಳು ಗರ್ಭಿಣಿಯಾದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಯಾನಾ ಪೊಲೀಸ್ ಠಾಣಾ ವ್ಯಾಪ್ತಿಯ ಸತ್ಸಂಗ ಭವನವೊಂದರಲ್ಲಿ ಸೇವಾದಾರ್ ಆಗಿ ಕೆಲಸ ಮಾಡುತ್ತಿದ್ದ ಮೋಹನ್ ಲಾಲ್ (75) ಎಂಬಾತ, ಅದೇ ಗ್ರಾಮದ 13ರ ಹರೆಯದ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇಬ್ಬರು ಬಾಲಕಿಯರ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದ್ದು, ಅದೇ ದಿನ ಆರೋಪಿಯನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಸಂತ್ರಸ್ತ ಬಾಲಕಿಯರನ್ನು ವೈದ್ಯಕೀಯ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ್ ಪ್ರಸಾದ್ ಹೇಳಿದ್ದಾರೆ.
ಸಂತ್ರಸ್ತೆಯೋರ್ವಳು ಗರ್ಭಿಣಿಯಾಗಿರುವುದು ಮನೆಯವರಿಗೆ ತಿಳಿದ ನಂತರ ವಿಷಯ ಬೆಳಕಿಗೆ ಬಂದಿದೆ. ಮೋಹನ್ ಲಾಲ್ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾಳೆ.