ಉತ್ತರ ಪ್ರದೇಶ | ಉಗುಳು ನೆಕ್ಕಿಸಿದ ಪೊಲೀಸರು : ಗ್ರಾಮ ಮುಖ್ಯಸ್ಥನ ಪ್ರತಿನಿಧಿಯಿಂದ ಆರೋಪ
ರಾಯ್ ಬರೇಲಿ : ಅನಧಿಕೃತವಾಗಿ ನೌಟಂಕಿ ಕಾರ್ಯಕ್ರಮವನ್ನು ಆಯೋಜಿಸಿ, ನೆರೆದಿದ್ದ ಜನರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪಕ್ಕೆ ಗುರಿಯಾಗಿರುವ ಗ್ರಾಮ ಮುಖ್ಯಸ್ಥನ ಪ್ರತಿನಿಧಿಯೊಬ್ಬನಿಂದ ಆತನ ಉಗುಳನ್ನೇ ಪೊಲೀಸರು ಬಲವಂತವಾಗಿ ನೆಕ್ಕಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ದೂರು ದಾಖಲಿಸಿರುವ ಘಟನೆ ಉತ್ತರ ಪ್ರದೇಶದ ನಸೀರಾಬಾದ್ ಪ್ರದೇಶದಲ್ಲಿ ನಡೆದಿದೆ.
ಅನಧಿಕೃತವಾಗಿ ನೌಟಂಕಿ ಕಾರ್ಯಕ್ರಮವನ್ನು ಏರ್ಪಡಿಸಿದ್ದ ನಸೀರಾಬಾದ್ ನಲ್ಲಿನ ಕಪೂರ್ ಪುರ್ ಗ್ರಾಮದ ಮುಖ್ಯಸ್ಥನ ಪ್ರತಿನಿಧಿ ಸುಶೀಲ್ ಶರ್ಮ, ಪಾನಮತ್ತನಾಗಿ ತನ್ನ ಸಹಚರರೊಂದಿಗೆ ನೆರೆದಿದ್ದ ಜನರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯ ಪೊಲೀಸರು ಶರ್ಮ ಸೇರಿದಂತೆ ಐವರನ್ನು ವಶಕ್ಕೆ ಪಡೆದ ನಂತರ, ಆತ ಪೊಲೀಸರೊಂದಿಗೂ ಅನುಚಿತವಾಗಿ ವರ್ತಿಸಿದ್ದಾನೆ ಎಂದು ರಾಯ್ ಬರೇಲಿ ಪೊಲೀಸ್ ವರಿಷ್ಠಾಧಿಕಾರಿ ಯಶ್ವೀರ್ ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ಪೊಲೀಸರ ವಿರುದ್ಧ ಕೇಳಿ ಬಂದಿರುವ ಆರೋಪಗಳ ಕುರಿತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯ ಮೂಲಕ ತನಿಖೆ ನಡೆಸಲಾಗುವುದು. ಅವರು ಸಲ್ಲಿಸಿದ ವರದಿಯನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಭರವಸೆ ನೀಡಿದ್ದಾರೆ.
ಆದರೆ, ಪೊಲೀಸರ ಆರೋಪಗಳನ್ನು ಅಲ್ಲಗಳೆದಿರುವ ಸುಶೀಲ್ ಶರ್ಮ, ತಡರಾತ್ರಿ ಗ್ರಾಮಕ್ಕೆ ಆಗಮಿಸಿದ ಪೊಲೀಸರು ನೌಟಂಕಿ ಕಾರ್ಯಕ್ರಮವನ್ನು ಸ್ಥಗಿತಗೊಳಿಸುವಂತೆ ನನಗೆ ಸೂಚಿಸಿದರು. ಇದರೊಂದಿಗೆ ನನ್ನೊಂದಿಗೆ ಇನ್ನೂ ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು, ನಮ್ಮ ಮೇಲೆ ಪೊಲೀಸ್ ಠಾಣೆಯಲ್ಲಿ ದೈಹಿಕ ಹಲ್ಲೆ ನಡೆಸಿದರು. ಅಲ್ಲದೆ, ನನ್ನ ಉಗುಳನ್ನು ನಾನೇ ನೆಕ್ಕುವಂತೆ ಮಾಡಿದರು ಎಂದು ಆರೋಪಿಸಿದ್ದಾರೆ.
ನಸೀರಾಬಾದ್ ಠಾಣಾಧಿಕಾರಿ ಶಿವಕಾಂತ್ ಪಾಂಡೆ ನನ್ನಿಂದ 2 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟರು ಎಂದೂ ಅವರು ಆರೋಪಿಸಿದ್ದಾರೆ.
ಈ ನಡುವೆ, ಘಟನೆಯ ಕುರಿತು ಶನಿವಾರ ಪೊಲೀಸ್ ವರಿಷ್ಠಾಧಿಕಾರಿಗೆ ಲಿಖಿತ ದೂರು ನೀಡಿರುವ ರಾಷ್ಟ್ರೀಯ ಪಂಚಾಯತಿ ರಾಜ್ ಗ್ರಾಮ್ ಪ್ರಧಾನ್ ಸಂಘಟನ್, ಈ ಕುರಿತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.