ಕಾನೂನಿಗೆ ಬದ್ಧವಾಗಿರಬೇಕು, ಆಸ್ತಿಗಳನ್ನು ಆಯ್ದು ಧ್ವಂಸಗೊಳಿಸುವಂತಿಲ್ಲ: ಉತ್ತರ ಪ್ರದೇಶ ಸರಕಾರಕ್ಕೆ ಅಲಹಾಬಾದ್ ಹೈಕೋರ್ಟ್‌ನ ಕಿವಿಮಾತು

Update: 2024-11-06 12:06 GMT

ಅಲಹಾಬಾದ್ ಹೈಕೋರ್ಟ್‌ | PC : PTI 

ಲಕ್ನೋ: ಬಹರೈಚ್‌ನಲ್ಲಿ ಅ.13ರಂದು ನಡೆದಿದ್ದ ಹಿಂಸಾಚಾರದಲ್ಲಿ ಭಾಗಿಯಾಗಿದ್ದರು ಎನ್ನಲಾಗಿರುವ ಕೆಲವು ಕಟ್ಟಡ/ಮನೆ ಮಾಲಕರ (23 ಜನರು) ವಿರುದ್ಧ ಹೊರಡಿಸಲಾಗಿರುವ ನೆಲಸಮ ನೋಟಿಸ್‌ಗೆ ಅನುಗುಣವಾಗಿ ಕಟ್ಟಡಗಳನ್ನು ಆಯ್ದು ಧ್ವಂಸಗೊಳಿಸಲಾಗುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುವಂತೆ ಅಲಹಾಬಾದ್ ಉಚ್ಚ ನ್ಯಾಯಾಲಯವು ಇಂದು ಉತ್ತರ ಪ್ರದೇಶ ಸರಕಾರಕ್ಕೆ ಮೌಖಿಕ ಸೂಚನೆಯನ್ನು ನೀಡಿದೆ.

‘ರಾಜ್ಯದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಯ್ದುಕೊಳ್ಳಲು ರಾಜ್ಯವು ಬಹಳಷ್ಟು ಜವಾಬ್ದಾರಿಗಳನ್ನು ಹೊಂದಿದೆ ಎನ್ನುವುದು ನನಗೆ ತಿಳಿದಿದೆ,ಆದರೆ ಕಟ್ಟಡಗಳನ್ನು ಆಯ್ದುಕೊಂಡು ಕಾರ್ಯಾಚರಣೆ ನಡೆಯದಂತೆ ಸರಕಾರವು ನೋಡಿಕೊಳ್ಳಬೇಕು. ಶಾಂತಿಯನ್ನು ಖಚಿತಪಡಿಸುವ ಉದ್ದೇಶ ಒಂದು ವಿಷಯ ಮತ್ತು ನೆಲಸಮ ಉದ್ದೇಶವು ಇನ್ನೊಂದು ವಿಷಯವಾಗಿದೆ. ದಯವಿಟ್ಟು ಕಾನೂನಿಗೆ ವಿರುದ್ಧವಾದ ಏನನ್ನೂ ಮಾಡಬೇಡಿ’ ಎಂದು ನ್ಯಾ.ಅತಾವು ರೆಹಮಾನ್ ಮಸೂದಿ ಅವರು ಹೆಚ್ಚುವರಿ ಅಡ್ವೊಕೇಟ್ ಜನರಲ್ ವಿ.ಕೆ.ಶಾಹಿ ಅವರಿಗೆ ತಿಳಿಸಿದರು.

ಬಹರೈಚ್ ಹಿಂಸಾಚಾರ ಪ್ರಕರಣದ ಆರೋಪಿಗಳ ಆಸ್ತಿಗಳನ್ನು ನೆಲಸಮಗೊಳಿಸುವ ಉತ್ತರ ಪ್ರದೇಶ ಸರಕಾರದ ಉದ್ದೇಶಿತ ಕ್ರಮವನ್ನು ಪ್ರಶ್ನಿಸಿ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯ ವಿಚಾರಣೆಯನ್ನು ಉಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು.

ಯಾವುದೇ ನೆಲಸಮ ಕಾರ್ಯವನ್ನು ಕೈಗೊಳ್ಳುವ ಮುನ್ನ ಸಂಬಂಧಿತ ನಿಯಮಗಳು ಮತ್ತು ಕಾನೂನುಗಳ ಪ್ರಕಾರ ಸೂಕ್ತ ಸರ್ವೆಯನ್ನು ನಡೆಸಬೇಕು ಮತ್ತು ಗಡಿರೇಖೆಯನ್ನು ನಿರ್ಧರಿಸಬೇಕು ಎಂದು ನ್ಯಾಯಮೂರ್ತಿಗಳಾದ ಮಸೂದಿ ಮತ್ತು ಸುಭಾಷ ವಿದ್ಯಾರ್ಥಿ ಅವರ ವಿಭಾಗೀಯ ಪೀಠವು ಹೇಳಿತು.

ಪಿಐಎಲ್‌ಗೆ ಸರಕಾರದ ಉತ್ತರವು ಕಡತದಿಂದ ಕಾಣೆಯಾಗಿದೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡ ಪೀಠವು,ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡುವ ಮುನ್ನ ವಿಷಯಕ್ಕೆ ಸಂಬಂಧಿಸಿದ ಕೆಳಗಿನ ಮೂರು ಅಂಶಗಳಿಗೆ ನಿರ್ದಿಷ್ಟವಾಗಿ ಉತ್ತರಿಸುವಂತೆ ಉತ್ತರ ಪ್ರದೇಶ ಸರಕಾರಕ್ಕೆ ಸೂಚಿಸಿತು.

► ಖಾಸಗಿ ವ್ಯಕ್ತಿಗಳಿಗೆ ನೋಟಿಸ್‌ಗಳನ್ನು ನೀಡುವ ಮೊದಲು ಕಾನೂನಿನ ಪ್ರಕಾರ ಸರ್ವೆ ಮತ್ತು ಗಡಿ ಗುರುತಿಸುವಿಕೆಯನ್ನು ಮಾಡಲಾಗಿದೆಯೇ?

► ನೋಟಿಸ್ ಹೊರಡಿಸಲಾಗಿರುವ ವ್ಯಕ್ತಿಗಳು ಆಸ್ತಿಯ ನಿಜವಾದ ಮಾಲಿಕರೇ ಅಥವಾ ಅವರಲ್ಲಿ ಕೆಲವರು ಕೇವಲ ಬಾಡಿಗೆದಾರರೇ ಎನ್ನುವುದನ್ನು ತಿಳಿದುಕೊಳ್ಳಲು ಸರಕಾರವು ಸಮೀಕ್ಷೆಯನ್ನು ನಡೆಸಿದೆಯೇ?

► ನೋಟಿಸ್‌ಗಳನ್ನು ಸೂಕ್ತ ಅಧಿಕಾರಿಗಳು ನೀಡಿದ್ದಾರೆಯೇ?

ಮುಂದಿನ ವಿಚಾರಣೆಯವರೆಗೆ ಕಾನೂನಿಗೆ ಅನುಗುಣವಲ್ಲದ ಯಾವುದನ್ನೂ ಮಾಡಲಾಗುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುವಂತೆ ಉಚ್ಚ ನ್ಯಾಯಾಲಯವು ರಾಜ್ಯದ ಪರ ವಕೀಲರಿಗೆ ಸೂಚಿಸಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News