ಉತ್ತರಾಖಂಡ | ಅರಣ್ಯೀಕರಣಕ್ಕೆ ನೀಡಿದ್ದ ನಿಧಿಯನ್ನು ಐಫೋನ್, ಲ್ಯಾಪ್‌ಟಾಪ್, ಕಟ್ಟಡ ನವೀಕರಣಕ್ಕೆ ಬಳಕೆ!

ಸಾಂದರ್ಭಿಕ ಚಿತ್ರ | PC ; NDTV
ಹೊಸದಿಲ್ಲಿ: ಪರಿಹಾರ ಅರಣ್ಯೀಕರಣಕ್ಕಾಗಿ ಹಂಚಿಕೆ ಮಾಡಿದ್ದ ಹಣವನ್ನು ಉತ್ತರಾಖಂಡದ ಅರಣ್ಯ ವಿಭಾಗಗಳು ಐಫೋನ್‌ಗಳು,ಲ್ಯಾಪ್‌ಟಾಪ್‌ಗಳು ಮತ್ತು ಕೂಲರ್‌ಗಳ ಖರೀದಿ, ಕಟ್ಟಡಗಳ ನವೀಕರಣ ಮತ್ತು ನ್ಯಾಯಾಲಯದಲ್ಲಿಯ ಪ್ರಕರಣಗಳಿಗಾಗಿ ಬಳಸಿಕೊಂಡಿರುವುದನ್ನು ಸಿಎಜಿ ವರದಿಯು ಬಹಿರಂಗಗೊಳಿಸಿದೆ.
2019-22ರ ಪರಿಹಾರ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ(ಸಿಎಎಂಪಿಎ)ದ ಕಾರ್ಯ ನಿರ್ವಹಣೆ ಕುರಿತ ಸಿಎಜಿ ವರದಿಯು ಪರಿಹಾರ ಅರಣ್ಯೀಕರಣವನ್ನು ಬಿಟ್ಟು ವಿವಿಧ ಚಟುವಟಿಕೆಗಳಿಗಾಗಿ 13.86 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದು ತೋರಿಸಿದೆ. ಪರಿಹಾರ ಅರಣ್ಯೀಕರಣದಡಿ ಕೈಗಾರಿಕೆ ಅಥವಾ ಮೂಲಸೌಕರ್ಯ ಅಭಿವೃದ್ಧಿಯಂತಹ ಅರಣ್ಯೇತರ ಉದ್ದೇಶಗಳಿಗಾಗಿ ಅರಣ್ಯ ಭೂಮಿಯನ್ನು ಬಳಸಲಾಗಿದ್ದರೆ ಅದನ್ನು ಅರಣ್ಯ ನಷ್ಟವನ್ನು ಸರಿದೂಗಿಸಲು ಕನಿಷ್ಠ ಸಮಾನ ವಿಸ್ತೀರ್ಣದ ಬೇರೆ ಭೂಪ್ರದೇಶದಲ್ಲಿ ಅರಣ್ಯವನ್ನು ಬೆಳೆಸುವುದು ಕಡ್ಡಾಯವಾಗಿದೆ.
ಸಿಎಎಂಪಿಎ ಮಾರ್ಗಸೂಚಿಗಳ ಪ್ರಕಾರ ನಿಧಿಯನ್ನು ಸ್ವೀಕರಿಸಿದ ಬಳಿಕ ಒಂದು ವರ್ಷದೊಳಗೆ ಅರಣ್ಯೀಕರಣವನ್ನು ಕೈಗೊಳ್ಳಬೇಕು. ಆದರೆ 37 ಪ್ರಕರಣಗಳಲ್ಲಿ ಅಂತಿಮ ಅನುಮತಿಯನ್ನು ಪಡೆದ ಎಂಟು ವರ್ಷಗಳಿಗೂ ಹೆಚ್ಚಿನ ಸಮಯದ ನಂತರ ಪರಿಹಾರ ಅರಣ್ಯೀಕರಣವನ್ನು ಕಾರ್ಯಗತಗೊಳಿಸಲಾಗಿದೆ ಎನ್ನುವುದನ್ನು ಬೆಟ್ಟು ಮಾಡಿರುವ ಸಿಎಜಿ ವರದಿಯು,ಇದರಿಂದಾಗಿ ವೆಚ್ಚದಲ್ಲಿ 11.54 ಕೋಟಿ ರೂ.ಗಳ ಹೆಚ್ಚಳವಾಗಿದೆ ಎಂದು ಹೇಳಿದೆ.
ನೆಟ್ಟ ಮರಗಳ ಬದುಕುಳಿಯುವಿಕೆ ಪ್ರಮಾಣವು ಶೇ.33.51ರಷ್ಟಿದ್ದು, ಇದು ಅರಣ್ಯ ಸಂಶೋಧನಾ ಸಂಸ್ಥೆಯು ಕಡ್ಡಾಯಗೊಳಿಸಿರುವ ಶೇ.60-ಶೇ.65ಕ್ಕಿಂತ ತುಂಬ ಕಡಿಮೆಯಾಗಿದೆ ಎಂದು ವರದಿಯು ಹೇಳಿದೆ.
ಅರಣ್ಯೀಕರಣಕ್ಕಾಗಿ ಭೂಮಿಯ ಸೂಕ್ತತೆಯ ಬಗ್ಗೆ ವಿಭಾಗೀಯ ಅರಣ್ಯಾಧಿಕಾರಿ(ಡಿಎಫ್‌ಒ)ಗಳು ತಪ್ಪು ಪ್ರಮಾಣಪತ್ರಗಳನ್ನು ನೀಡಿದ್ದರು ಮತ್ತು ಭೂಮಿಯ ನಿಜವಾದ ಸ್ಥಿತಿಯನ್ನು ಖಚಿತಪಡಿಸಿಕೊಂಡಿರಲಿಲ್ಲ ಎಂದು ಹೇಳಿರುವ ವರದಿಯು, ನಿರ್ಲಕ್ಷ್ಯಕ್ಕಾಗಿ ಸಂಬಂಧಿತ ಡಿಎಫ್‌ಒಗಳ ವಿರುದ್ಧ ಅರಣ್ಯ ಇಲಾಖೆಯು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಬೆಟ್ಟು ಮಾಡಿದೆ.