ಉತ್ತರಾಖಂಡ: ನಿರ್ಮಾಣ ಹಂತದ ಸುರಂಗಮಾರ್ಗ ಕುಸಿತ, 36 ಕಾರ್ಮಿಕರ ರಕ್ಷಣೆಗೆ ಕಾರ್ಯಾಚರಣೆ
ಡೆಹ್ರಾಡೂನ್: ಉತ್ತರಾಖಂಡದ ಬ್ರಹ್ಮಕಾಲ್-ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲರಿ ನಿರ್ಮಾಣಹಂತದ ಸುರಂಗಮಾರ್ಗದ ಒಂದು ಭಾಗವು ರವಿವಾರ ಮುಂಜಾನೆ ಕುಸಿದುಬಿದ್ದಿದ್ದು, ಕನಿಷ್ಠ 36 ಕಾರ್ಮಿಕರು ಒಳಗೆ ಸಿಕ್ಕಿಹಾಕಿಕೊಂಡಿದ್ದಾರೆ.
ಆದರೆ ಈವರೆಗೆ ಯಾವುದೇ ಸಾವು ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲವೆಂದು ಅಧಿಕೃತ ಮೂಲಗಳು ತಿಳಿಸಿವೆ. ಉತ್ತರಕಾಶಿ ಜಿಲ್ಲೆಯ ಸಿಲಿಕಿಯಾರಾ ಹಾಗೂ ದಂಡಲ್ಗಾಂವ್ ಗ್ರಾಮಗಳ ನಡುವೆ ಸಾಗುವ ಹೆದ್ದಾರಿಗೆ ನಿರ್ಮಿಸಲಾಗುತ್ತಿರುವ ಸುರಂಗ ಮಾರ್ಗದಲ್ಲಿ ರವಿವಾರ ನಸುಕಿನಲ್ಲಿ ಸುಮಾರು 4 ಗಂಟೆಗೆ ದುರ್ಘಟನೆ ಸಂಭವಿಸಿದೆ.
‘‘ಕುಸಿದುಬಿದ್ದ ಸುರಂಗಮಾರ್ಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ, ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ, ಪೊಲೀಸ್ ಹಾಗೂ ಅಗ್ನಿಶಾಮಕದಳಗಳು ನಿರತವಾಗಿವೆ. ಸುರಂಗಮಾರ್ಗದೊಳಗೆ 36 ಕಾರ್ಮಿಕರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಉತ್ತರಕಾಶಿ ಪೊಲೀಸ್ ಆಧೀಕ್ಷಕ ಅರ್ಪಣ್ ಯದುವಂಶಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ, ನಾವು ಅವರೆಲ್ಲರನ್ನೂ ಸುರಕ್ಷಿತವಾಗಿ ಪಾರುಮಾಡಲಿದ್ದೇವೆ’’ ಎಂದು ಅವರು ಹೇಳಿದ್ದಾರೆ.
ಅವಘಡದ ಸ್ಥಳದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಉುದ್ಯೋಗಿಗಳು ಕೂಡಾ ಇದ್ದುದಾಗಿ ಮೂಲಗಳು ತಿಳಿಸಿವೆ.
ಸುರಂಗಮಾರ್ಗ ಕುಸಿತ ಘಟನೆಗೆ ಸಂಬಂಧಿಸಿದಂತೆ ತಾನು ಉನ್ನತ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿರುವುದಾಗಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.