ರಾಜಸ್ಥಾನ ಸಿಎಂ ಆಯ್ಕೆ ಕಗ್ಗಂಟು: ದೆಹಲಿಗೆ ಧಾವಿಸಿದ ವಸುಂಧರ ರಾಜೇ
ಹೊಸದಿಲ್ಲಿ: ಕಾಂಗ್ರೆಸ್ ಮುಖಂಡ ರೇವನಾಥ್ ರೆಡ್ಡಿ ತೆಲಂಗಾಣ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ ಬಿಜೆಪಿ ಮಾತ್ರ ಇನ್ನೂ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ಗಢದಲ್ಲಿ ಸ್ಪಷ್ಟ ಬಹುಮತ ಇದ್ದರೂ ಮುಖ್ಯಮಂತ್ರಿಯನ್ನು ಅಂತಿಮಪಡಿಸಲು ಸಾಧ್ಯವಾಗಿಲ್ಲ. ಗುರುವಾರ ನಡೆಯುವ ಪಕ್ಷದ ಹಿರಿಯ ಮುಖಂಡರ ಸಭೆಯಲ್ಲಿ ಮೂರು ರಾಜ್ಯಗಳ ಮುಖ್ಯಮಂತ್ರಿ ಹೆಸರು ಅಂತಿಮಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಮೂರೂ ಕಡೆಗಳಲ್ಲಿ ಹೊಸ ಮುಖಗಳನ್ನು ಪರಿಚಯಿಸಲು ಪಕ್ಷದ ಮುಖಂಡರು ನಿರ್ಧರಿಸಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ. ಈ ಮಧ್ಯೆ ರಾಜಸ್ಥಾನದ ಮಾಜಿ ಸಿಎಂ ಹಾಗೂ ಸಿಎಂ ಹುದ್ದೆಯ ಆಕಾಂಕ್ಷಿ ವಸುಂಧರ ರಾಜೇ ಅವರು ಬುಧವಾರ ರಾತ್ರಿ ದೆಹಲಿಗೆ ಧಾವಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಆದರೆ ಸಿಎಂ ಹುದ್ದೆ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ ಅವರು, "ನನ್ನ ಸೊಸೆಯನ್ನು ನೋಡಲು ದೆಹಲಿಗೆ ಬಂದಿದ್ದೇನೆ" ಎಂದು ದೆಹಲಿ ವಿಮಾನ ನಿಲ್ದಾಣದ ಹೊರಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ವಿಧಾನಸಭಾ ಚುನಾವಣೆಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಸಂಸದರು ಬುಧವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮಧ್ಯಪ್ರದೇಶ ವಿಧಾನಸಭೆಗೆ ಆಯ್ಕೆಯಾಗಿರುವ ನರೇಂದ್ರ ಥೋಮರ್, ಪ್ರಹ್ಲಾದ್ ಪಟೇಲ್, ರಿತಿ ಪಾಠಾ, ರಾಜೇಶ್ ಸಿಂಗ್, ಉದಯ ಪ್ರತಾಪ್ ಸಿಂಗ್, ರಾಜಸ್ಥಾನ ವಿಧಾನಸಭೆಗೆ ಆರಿಸಿ ಬಂದಿರುವ ರಾಜ್ಯವರ್ಧನ ಸಿಂಗ್ ರಾಥೋಡ್, ಕಿರೋಡಿಲಾಲ್ ಮೀನಾ ಹಾಗೂ ದಿಯಾ ಕುಮಾರ್ ರಾಜೀನಾಮೆ ನೀಡಿದ ಪ್ರಮುಖರಲ್ಲಿ ಸೇರಿದ್ದಾರೆ.
ಎರಡು ಅವಧಿಗೆ ರಾಜಸ್ಥಾನದ ಸಿಎಂ ಆಗಿದ್ದ ವಸುಂಧರ ರಾಜೇ, ಈ ಸಾಧನೆ ಮಾಡಿದ ಏಕೈಕ ಸಿಎಂ ಎನಿಸಿಕೊಂಡಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಕೇವಲ 69 ಸ್ಥಾನಗಳಿಗೆ ಸೀಮಿತಗೊಳಿಸಿ 115 ಸ್ಥಾನಗಳೊಂದಿಗೆ ಬಿಜೆಪಿ ಜಯ ಸಾಧಿಸಿದ್ದು, ರಾಜೇ ಮೂರನೇ ಅವಧಿಗೆ ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ.
ಫಲಿತಾಂಶ ಬಂದ ಬಳಿಕ ಹಲವು ಮಂದಿ ಶಾಸಕರು ರಾಜೇ ನಿವಾಸಕ್ಕೆ ಭೇಟಿ ನೀಡಿದ್ದರು. ಇದು ಬಲಪ್ರದರ್ಶನವಲ್ಲ. ವಸುಂಧರರಾಜೇ ಸಿಎಂ ಆಗಬೇಕು ಎನ್ನುವುದು ಸಾರ್ವಜನಿಕರ ಅಪೇಕ್ಷೆಯಾಗಿದೆ. ಅಂತಿಮವಾಗಿ ಮುಖ್ಯಮಂತ್ರಿಯ ಆಯ್ಕೆ ನಾಯಕರಿಗೆ ಬಿಟ್ಟದ್ದು ಎಂದು ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.