ಮಣಿಪುರದಲ್ಲಿ ಮತ್ತೆ ಹಿಂಸಾಚಾರ ; ಗುಂಡು ಹಾರಿಸಿ ಮೂವರ ಹತ್ಯೆ
ಇಂಫಾಲ: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದ್ದು, ಕಂಗ್‌ಪೊಕ್ಪಿ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ಕುಕಿ-ರೊ ಬುಡಕಟ್ಟುಗೆ ಸೇರಿದ ಮೂವರನ್ನು ಶಂಕಿತ ಉಗ್ರರು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.
ಈ ಘಟನೆ ಜಿಲ್ಲೆಯ ಕಂಗ್ಗುಯಿ ಪ್ರದೇಶದ ಇರೆಂಗ್ ಹಾಗೂ ಕರಮ್ ವೈಫೈಯ ಗ್ರಾಮಗಳ ನಡುವೆ ಬೆಳಗ್ಗೆ ಸುಮಾರು 8.30ಕ್ಕೆ ನಡೆದಿದೆ. ಈ ಪ್ರದೇಶದಲ್ಲಿ ನಿಯೋಜಿಸಲಾಗಿರುವ ಭದ್ರತಾ ಪಡೆಗಳು ಶಂಕಿತರನ್ನು ಬಂಧಿಸಲು ಶೋಧ ಕಾರ್ಯಾಚರಣೆ ಆರಂಭಿಸಿವೆ.
‘‘ಕುಕಿ ಸಮುದಾಯದ ಮೂವರು ವ್ಯಕ್ತಿಗಳು ವಾಹನವೊಂದರಲ್ಲಿ ಪ್ರಯಾಣಿಸುತ್ತಿದ್ದಾಗ ಶಸಸ್ತ್ರ ಉಗ್ರರು ಅಡ್ಡಗಟ್ಟಿ ಗುಂಡು ಹಾರಿಸಿ ಹತ್ಯೆಗೈದರು’’ ಎಂದು ಕಂಗ್‌ಪೊಕ್ಪಿಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಥೊಲು ರಾಕಿ ತಿಳಿಸಿದ್ದಾರೆ.
‘‘ಯಾವುದೇ ಗುಂಡಿನ ಚಕಮಕಿ ನಡೆದಿಲ್ಲ. ಆರೋಪಿಗಳನ್ನು ಬಂಧಿಸಲು ನಾವು ತನಿಖೆ ಆರಂಭಿಸಿದ್ದೇವೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ’’ ಎಂದು ರಾಕಿ ಮಾಹಿತಿ ನೀಡಿದ್ದಾರೆ.
ಇಂಫಾಲ ಪಶ್ಚಿಮ ಹಾಗೂ ಕಂಗ್‌ಪೊಕ್ಪಿ ಜಿಲ್ಲೆಗಳ ಗಡಿ ಪ್ರದೇಶದಲ್ಲಿ ಈ ದಾಳಿ ನಡೆದಿದೆ. ಮೂವರನ್ನು ಹತ್ಯೆಗೈದ ಬಳಿಕ ಶಂಕಿತ ಉಗ್ರರು ಈ ಪ್ರದೇಶದಿಂದ ತಮ್ಮ ವಾಹನದಲ್ಲಿ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
‘‘ಪೊಲೀಸ್ ಹಾಗೂ ಅಸ್ಸಾಂ ರೈಫಲ್ಸ್‌ನ ತುಕಡಿ ಘಟನಾ ಸ್ಥಳಕ್ಕೆ ತಲುಪಿದೆ. ಭದ್ರತಾ ಪಡೆಗಳು ಜಂಟಿಯಾಗಿ ಈ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ನಡೆಸುತ್ತಿವೆ’’ ಎಂದು ಪ್ರಕರಣದ ಬಗ್ಗೆ ಮಾಹಿತಿ ಇರುವ ಇನ್ನೋರ್ವ ಅಧಿಕಾರಿ ತಿಳಿಸಿದ್ದಾರೆ.
ಕುಕಿ ಮಾತೃ ಸಂಸ್ಥೆ ಇಂಡಿಜೀನಿಯಸ್ ಟ್ರೈಬಲ್ ಲೀಡರ್ಸ್ ಫಾರಂ (ಐಟಿಎಲ್‌ಎಫ್) ಹತ್ಯೆಯಾದವರನ್ನು ಸಟ್ನಿಯೊ ಟುಬೊಯಿ, ನ್ಗಾಮ್ಮಿನ್ಲುನ್ ಲ್ಹೊವುವುಮ್ (ಇಬ್ಬರೂ ಕೆ. ಪೊನ್ಲೆನ್‌ನವರು) ಹಾಗೂ ಲ್ಹಂಗ್‌ಕಿಚೊಯಿಯ ನ್ಗಾಮ್ಮಿನುಲ್ ಕಿಪ್‌ಗೆನ್ ಎಂದು ಗುರುತಿಸಿದೆ.
ಮೃತಪಟ್ಟ ಮೂವರು ಕುಕಿ-ರೊ ಸಮುದಾಯದವರು ಎಂದು ಕಮಿಟಿ ಆನ್ ಟ್ರೈಬಲ್ ಯುನಿಟಿ (ಸಿಒಟಿಯು) ಹೇಳಿಕೆ ತಿಳಿಸಿದೆ. ಶಸಸ್ತ್ರ ಉಗ್ರರು ಸೇನಾ ಸಮವಸ್ತ್ರ ಧರಿಸಿದ್ದರು ಎಂದು ಅದು ತಿಳಿಸಿದೆ.