ವಕ್ಫ್ ಮಸೂದೆ | ಜಂಟಿ ಸಂಸದೀಯ ಸಮಿತಿ ಸಭೆಗೆ ವಿರೋಧ ಪಕ್ಷದ ಸಂಸದರಿಂದ ಬಹಿಷ್ಕಾರ

Update: 2024-10-14 13:38 GMT

ಗೌರವ್ ಗೊಗೊಯ್ , ಅಸದುದ್ದೀನ್ ಉವೈಸಿ | PTI

ಹೊಸದಿಲ್ಲಿ : ವಕ್ಫ್ ತಿದ್ದುಪಡಿ ವಿಧೇಯಕದ ಪರಿಶೀಲನೆಗೆ ನೇಮಿಸಿರುವ ಸಂಸದೀಯ ಸಮಿತಿಯು ನಿಯಮಗಳು ಮತ್ತು ನಿಬಂಧನೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿ ಹಲವು ವಿರೋಧ ಪಕ್ಷದ ಸಂಸದರು ಸೋಮವಾರ ಆಯೋಜಿಸಿದ್ದ ಸಭೆಯನ್ನು ಬಹಿಷ್ಕರಿಸಿದ್ದಾರೆ.

ವಿರೋಧ ಪಕ್ಷದ ಸಂಸದರಾದ ಗೌರವ್ ಗೊಗೊಯ್ ಮತ್ತು ಕಾಂಗ್ರೆಸ್‌ನ ಇಮ್ರಾನ್ ಮಸೂದ್, ಡಿಎಂಕೆಯ ಎ ರಾಜಾ, ಶಿವಸೇನೆಯ (ಯುಬಿಟಿ) ಅರವಿಂದ್ ಸಾವಂತ್, ಎಐಎಂಐಎಂನ ಅಸದುದ್ದೀನ್ ಉವೈಸಿ, ಸಮಾಜವಾದಿ ಪಕ್ಷದ ಮೊಹಿಬ್ಬುಲ್ಲಾ ಮತ್ತು ಆಮ್ ಆದ್ಮಿ ಪಕ್ಷದ ಸಂಜಯ್ ಸಿಂಗ್ ಅವರು ಸಮಿತಿಯ ಸಭೆ ಮತ್ತು ಪ್ರಕ್ರಿಯೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶಿವಸೇನೆಯ (ಯುಬಿಟಿ) ಅರವಿಂದ್ ಸಾವಂತ್ ಅವರು ಮಸೂದೆಯನ್ನು ಪರಿಶೀಲಿಸುತ್ತಿರುವ ಸಂಸತ್ತಿನ ಜಂಟಿ ಸಮಿತಿಯು ನಿಯಮಗಳು ಮತ್ತು ನಿಬಂಧನೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಂತಹ ಹಿರಿಯ ವಿರೋಧ ಪಕ್ಷದ ಸದಸ್ಯರ ವಿರುದ್ಧ ವೈಯಕ್ತಿಕ ಆರೋಪಗಳನ್ನು ಮಾಡಲು ಜಂಟಿ ಸದನ ಸಮಿತಿಯು ಅವಕಾಶ ಮಾಡಿಕೊಟ್ಟಿದೆ ಎಂದು ಅವರು ಕಿಡಿಕಾರಿದ್ದಾರೆ. ಅವರ ಮಾತಿಗೆ ಇತರ ಕೆಲವು ಸಂಸದರೂ ದನಿಗೂಡಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸಮಿತಿಯ ಸಭೆಗೆ ವಿರೋಧ ವ್ಯಕ್ತಪಡಿಸಿದ ವಿರೋಧ ಪಕ್ಷದ ಸದಸ್ಯರು ತಮ್ಮ ಮುಂದಿನ ಕ್ರಮವನ್ನು ನಿರ್ಧರಿಸಲು ಪ್ರತ್ಯೇಕ ಸಭೆ ನಡೆಸಿದರು ಎಂದು ತಿಳಿದು ಬಂದಿದೆ. ಅವರಲ್ಲಿ ಕೆಲವರು ಒಂದೆರಡು ದಿನಗಳಲ್ಲಿ ಲೋಕಸಭೆ ಸ್ಪೀಕರ್ ಅವರನ್ನು ಭೇಟಿಯಾಗಿ ಈ ಕುರಿತು ಚರ್ಚಿಸುವಂತೆ ಸೂಚಿಸಿದರು ಎನ್ನಲಾಗಿದೆ.

ಈ ಮಧ್ಯೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಿರಿಯ ಸಂಸದ ಜಗದಾಂಬಿಕಾ ಪಾಲ್ ನೇತೃತ್ವದ ಜಂಟಿ ಸದನ ಸಮಿತಿಯು ತನ್ನ ಸಭೆಯನ್ನು ಮುಂದುವರೆಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News