ಮೀಸಲಾತಿ ಮೇಲಿನ ಶೇ.50ರ ಮಿತಿಯನ್ನು ತೆಗೆದುಹಾಕುತ್ತೇವೆ: ರಾಹುಲ್ ಗಾಂಧಿ

Update: 2024-11-18 07:15 GMT

ರಾಹುಲ್ ಗಾಂಧಿ (Photo: PTI)

ಮುಂಬೈ: ಮೀಸಲಾತಿ ಮೇಲಿನ ಶೇ.50ರ ಮಿತಿಯನ್ನು ತೆಗೆದು ಹಾಕಲಾಗುವುದು ಮತ್ತು ದೇಶದಲ್ಲಿ ಜಾತಿ ಆಧಾರಿತ ಸಮೀಕ್ಷೆ ನಡೆಸಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಭರವಸೆ ನೀಡಿದ್ದಾರೆ.

ಮುಂಬೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಜಾತಿಗಣತಿ ನಮ್ಮ ಮುಂದಿರುವ ದೊಡ್ಡ ಸಮಸ್ಯೆಯಾಗಿದೆ ಮತ್ತು ನಾವು ಅದನ್ನು ಮಾಡುತ್ತೇವೆ, ಇದು ನಮಗೆ ಮುಖ್ಯ ವಿಚಾರವಾಗಿದೆ. ನವೆಂಬರ್ 20ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸಿದ್ಧಾಂತಗಳ ನಡುವಿನ ಕದನ ಮತ್ತು ಕೆಲವು ಕೋಟ್ಯಾಧಿಪತಿಗಳು ಮತ್ತು ಬಡವರ ನಡುವಿನ ಹೋರಾಟವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಫಾಕ್ಸ್ಕಾನ್ ಮತ್ತು ಏರ್ಬಸ್ ಸೇರಿದಂತೆ 7 ಲಕ್ಷ ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಮಹಾರಾಷ್ಟ್ರದಿಂದ ಗುಜರಾತ್ ಗೆ ಸ್ಥಳಾಂತರಿಸಲಾಗಿದೆ. ಇದರಿಂದಾಗಿ ಮಹಾರಾಷ್ಟ್ರದ ಯುವಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಮಹಾ ವಿಕಾಸ್ ಅಘಾಡಿ ಸರ್ಕಾರವು ಮಹಾರಾಷ್ಟ್ರದ ಜನರ ಹಿತಾಸಕ್ತಿಗಳನ್ನು ರಕ್ಷಿಸಲಿದೆ. ಮುಂಬೈನ ಧಾರಾವಿ ಪುನರಾಭಿವೃದ್ಧಿ ಯೋಜನೆಯಲ್ಲಿ ಒಬ್ಬ ವ್ಯಕ್ತಿಗೆ ಸಹಾಯ ಮಾಡಲು ಇಡೀ ರಾಜಕೀಯ ಯಂತ್ರವನ್ನು ತಿರುಚಲಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಪ್ರಧಾನಿ ಮೋದಿಯವರ 'ಏಕ್ ಹೈ ತೋ ಸೇಫ್ ಹೈ' ಎಂಬ ಘೋಷಣೆಯನ್ನು ಲೇವಡಿ ಮಾಡಿದ ರಾಹುಲ್ ಗಾಂಧಿ, ಮೋದಿ ಮತ್ತು ಕೈಗಾರಿಕೋದ್ಯಮಿ ಅದಾನಿಯನ್ನು ಉಲ್ಲೇಖಿಸಿ "ಅವರು ಒಟ್ಟಿಗೆ ಇರುವವರೆಗೂ ಅವರು ಸುರಕ್ಷಿತವಾಗಿರುತ್ತಾರೆʼ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News