ಸುವೇಂದು ಅಧಿಕಾರಿ, ತಪಸ್ ರಾಯ್ ವಿರುದ್ಧ ಸಿಬಿಐ, ಈಡಿ ಕ್ರಮ ನಿಲ್ಲಿಸಿದ್ದೇಕೆ?: ಪ್ರಧಾನಿಗೆ ಕಾಂಗ್ರೆಸ್ ಪ್ರಶ್ನೆ
ಹೊಸದಿಲ್ಲಿ : ಪಶ್ಚಿಮ ಬಂಗಾಳಕ್ಕೆ 7,000 ಕೋಟಿ ರೂ.ಗಳ ಭತ್ತ ಖರೀದಿ ಹಣವನ್ನು ತಡೆಹಿಡಿದಿದ್ದೀರಾ ಮತ್ತು ಸುವೇಂದು ಅಧಿಕಾರಿ ವಿರುದ್ಧದ ಸಿಬಿಐ ಪ್ರಕರಣ ಬಿಜೆಪಿಯ ವಾಷಿಂಗ್ ಮಷಿನ್ ನಲ್ಲಿ ತೊಳೆದು ಹೋಗಿದೆಯೇ ಎಂದು ಕಾಂಗ್ರೆಸ್ ಬುಧವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿದೆ.
ಪ್ರಧಾನಿಯವರು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಲಸಿಕೆಗಳು ಮತ್ತು ನಿಧಿಗಳಿಗಿಂತ ಹೆಚ್ಚಿನ ಆದ್ಯತೆಯನ್ನು ತನ್ನ ಪ್ರಚಾರಕ್ಕೆ ನೀಡಿದ್ದಾರೆಯೇ ಎಂದೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಪ್ರಶ್ನಿಸಿದ್ದಾರೆ.
‘ನಿರ್ಗಮಿಸುತ್ತಿರುವ ಪ್ರಧಾನಿಗೆ ಪಶ್ಚಿಮ ಬಂಗಾಳ ಭೇಟಿಗಾಗಿ ಇಂದಿನ ಪ್ರಶ್ನೆಗಳು: ಅವರು ನ್ಯಾಯಬೆಲೆ ಅಂಗಡಿಗಳಲ್ಲಿ ತನ್ನ ಮುಖವನ್ನು ಪ್ರದರ್ಶಿಸುವಂತಾಗಲು 7,000 ಕೋಟಿ ರೂ.ಗಳ ಪಡಿತರ ನಿಧಿಯನ್ನು ತಡೆಹಿಡಿದಿದ್ದಾರೆಯೇ? ಸುವೇಂದು ಅಧಿಕಾರಿ ವಿರುದ್ಧದ ಸಿಬಿಐ ಪ್ರಕರಣ ಬಿಜೆಪಿಯ ವಾಷಿಂಗ್ ಮಷಿನ್ನಲ್ಲಿ ತೊಳೆದು ಹೋಗಿದೆಯೇ? ಪ್ರಧಾನಿ ಭಾರತೀಯ ಮಕ್ಕಳಿಗೆ ಲಸಿಕೆಗಳಿಗಿಂತ ಹೆಚ್ಚಿನ ಆದ್ಯತೆಯನ್ನು ತನ್ನ ಪ್ರಚಾರಕ್ಕೆ ನೀಡಿದ್ದಾರೆಯೇ?ʼ ಎಂದು ತನ್ನ ಎಕ್ಸ್ ಪೋಸ್ಟ್ನಲ್ಲಿ ರಮೇಶ್ ಪ್ರಶ್ನಿಸಿದ್ದಾರೆ. ಮೋದಿ ಚುನಾವಣಾ ಪ್ರಚಾರಕ್ಕಾಗಿ ಬುಧವಾರ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದರು.
ನಂಬಲಸಾಧ್ಯ ಕ್ಷುಲ್ಲಕ ಕ್ರಮದಲ್ಲಿ ಕೇಂದ್ರವು ಪಡಿತರ ಅಂಗಡಿಗಳಲ್ಲಿ ನಿರ್ಗಮಿಸುತ್ತಿರುವ ಪ್ರಧಾನಿ ಚಿತ್ರವನ್ನು ಪ್ರದರ್ಶಿಸದ್ದಕ್ಕಾಗಿ ಪಶ್ಚಿಮ ಬಂಗಾಳಕ್ಕಾಗಿ ರಾಷ್ಟ್ರೀಯ ಆಹಾರ ಸುರಕ್ಷತಾ ಕಾಯ್ದೆಯಡಿ ನಿಧಿಯನ್ನು ತಡೆಹಿಡಿದಿದೆ. ನಿರ್ಗಮಿಸುತ್ತಿರುವ ಪ್ರಧಾನಿಯವರ ಚಿತ್ರಗಳನ್ನೊಳಗೊಂಡ ಸೈನ್ ಬೋರ್ಡ್ ಗಳು ಮತ್ತು ಫ್ಲೆಕ್ಸ್ ಗಳನ್ನು ಪ್ರದರ್ಶಿಸಲು ರಾಜ್ಯ ಸರಕಾರದ ಮೇಲೆ ಒತ್ತಡ ಹೇರುವ ತಂತ್ರವಾಗಿ ಕೇಂದ್ರವು ಭತ್ತ ಖರೀದಿ ನಿಧಿಯ 7,000 ಕೋಟಿ ರೂ.ಗಳನ್ನು ತಡೆಹಿಡಿದಿದೆ ಎಂದು ರಮೇಶ್ ಆರೋಪಿಸಿದ್ದಾರೆ.
ಇದು ರಾಜ್ಯದ ಭತ್ತ ಖರೀದಿ ಪ್ರಕ್ರಿಯೆ ಮತ್ತು ಸಾರ್ವಜನಿಕ ವಿತರಣೆ ವ್ಯವಸ್ಥೆಗೆ ಅಕ್ಕಿಯ ಲಭ್ಯತೆಗೆ ಗಂಭೀರ ಅಡ್ಡಿಯನ್ನುಂಟು ಮಾಡಬಹುದು ಎಂದು ಹೇಳಿರುವ ರಮೇಶ್, ನಿರ್ಗಮಿಸುತ್ತಿರುವ ಪ್ರಧಾನಿಯವರು ಪಶ್ಚಿಮ ಬಂಗಾಳದ ಜನರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಏಕೆ ನಿರ್ಲಕ್ಷಿಸಿದ್ದಾರೆ? ಅವರಿಗೆ ಜನರ ದೈನಂದಿನ ಆಹಾರಕ್ಕಿಂತ ತನ್ನ ಪ್ರಚಾರವೇ ಮುಖ್ಯವೇ ಎಂದು ಪ್ರಶ್ನಿಸಿದ್ದಾರೆ.
ಎಪ್ರಿಲ್, 2017ರಲ್ಲಿ ಸಿಬಿಐ ನಾರದ ಹಗರಣಕ್ಕೆ ಸಂಬಂಧಿಸಿದಂತೆ ಆಗಿನ ಟಿಎಂಸಿ ಸಂಸದ ಅಧಿಕಾರಿ ವಿರುದ್ಧ ಎಫ್ಐಆರ್ ದಾಖಲಿಸಿತ್ತು. ಎಪ್ರಿಲ್ 2019ರಲ್ಲಿ ಸಿಬಿಐ ಅಧಿಕಾರಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಲೋಕಸಭಾ ಸ್ಪೀಕರ್ ಅನುಮತಿಯನ್ನು ಕೋರಿತ್ತು. ಡಿಸೆಂಬರ್, 2020ರಲ್ಲಿ ಅಧಿಕಾರಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು ಮತ್ತು ಸಿಬಿಐ ಎಂದೂ ಲೋಕಸಭಾ ಸ್ಪೀಕರ್ ಅನುಮತಿಯನ್ನು ಸ್ವೀಕರಿಸಲಿಲ್ಲ. ಇದೇ ರೀತಿ ಈ ವರ್ಷದ ಜನವರಿಯಲ್ಲಿ ಜಾರಿ ನಿರ್ದೇಶನಾಲಯ (ಈ.ಡಿ)ವು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ನಾಯಕ ತಪಸ್ ರಾಯ್ ಮೇಲೆ ದಾಳಿ ನಡೆಸಿತ್ತು ಮತ್ತು ಮಾರ್ಚ್ ವೇಳೆಗೆ ಅವರೂ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಈ ನಾಯಕರಿಬ್ಬರ ವಿರುದ್ಧ ಕ್ರಮಗಳೇಕೆ ಸ್ಥಗಿತಗೊಂಡಿವೆ ಎಂದು ರಮೇಶ್ ಮೋದಿಯವರನ್ನು ಪ್ರಶ್ನಿಸಿದ್ದಾರೆ.